ADVERTISEMENT

ಪುರುಷರಿಂದಲೂ ಆಗದ್ದನ್ನು ಸಾಧಿಸಿದ ದೀಪ್ತಿ ಶರ್ಮಾ: T20 ಕ್ರಿಕೆಟ್‌ನ ವಿಶ್ವದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಡಿಸೆಂಬರ್ 2025, 6:09 IST
Last Updated 27 ಡಿಸೆಂಬರ್ 2025, 6:09 IST
ದೀಪ್ತಿ ಶರ್ಮಾ 
ದೀಪ್ತಿ ಶರ್ಮಾ    

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ಹಾಗೂ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಟೀಂ ಇಂಡಿಯಾದ ತಾರಾ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಸದ್ಯ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಮಿಂಚಿನ ಪ್ರದರ್ಶನ ನೀಡುತ್ತಿದ್ದಾರೆ.

ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ 2 ವಿಕೆಟ್ ಪಡೆಯುತ್ತಿದ್ದಂತೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ ಪಡೆದ ಸಾಧನೆ ಮಾಡಿದರು. ಈ ಪಂದ್ಯಕ್ಕೂ ಮೊದಲು ಅವರು ಬ್ಯಾಟಿಂಗ್‌ನಲ್ಲಿ 1 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದರು.

ನಿನ್ನೆ ನಡೆದ ಪಂದ್ಯದಲ್ಲಿ ದೀಪ್ತಿ ಶರ್ಮಾ ಅವರು (4–0–18–3) ವಿಕೆಟ್ ಪಡೆದ ಮಿಂಚಿದರು. ಆ ಮೂಲಕ ಅವರು ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್ ಹಾಗೂ 1 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎಂಬ ಸಾಧನೆ ಮಾಡಿದರು. ಇನ್ನೂ ಈ ಸಾಧನೆಯನ್ನು ಯಾವುದೇ ಪುರುಷ ಆಟಗಾರ ಕೂಡ ಮಾಡಿಲ್ಲ ಎಂಬುದು ಗಮನಾರ್ಹ ಅಂಶ.

ADVERTISEMENT

ಮೆಗನ್ ಶುಟ್ ದಾಖಲೆ ಸರಿಗಟ್ಟಿದ ದೀಪ್ತಿ

ಮಹಿಳಾ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದವರ ಸಾಲಿನಲ್ಲಿ ದೀಪ್ತಿ ಶರ್ಮಾ ಅವರು ಆಸ್ಟ್ರೇಲಿಯಾದ ಮೆಗನ್ ಶುಟ್ ಅವರ ದಾಖಲೆ ಸರಿಗಟ್ಟುವ ಮೂಲಕ ಜಂಟಿ ಅಗ್ರಸ್ಥಾನಕ್ಕೇರಿದರು. ದೀಪ್ತಿ ಹಾಗೂ ಮೆಗನ್ ಶುಟ್ ಇಬ್ಬರೂ 151 ವಿಕೆಟ್ ಪಡೆದಿದ್ದಾರೆ.

ದೀಪ್ತಿ ಶರ್ಮಾ 131 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 18.73 ಸರಾಸರಿಯಲ್ಲಿ 151 ವಿಕೆಟ್ ಪಡೆದಿದ್ದಾರೆ ಹಾಗೂ ಮೆಗನ್ ಶುಟ್ 123 ಪಂದ್ಯಗಳಲ್ಲಿ 17.70 ಸರಾಸರಿಯಲ್ಲಿ 151 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

ಪುರುಷರ ಟಿ20 ಕ್ರಿಕೆಟ್ 2007ರಲ್ಲೇ ಪ್ರಾರಂಭವಾದರೂ ಕೂಡ ಯಾವುದೇ ಆಟಗಾರ 150 ವಿಕೆಟ್ ಹಾಗೂ 1 ಸಾವಿರ ರನ್ ಗಡಿ ದಾಟಿದ ಸಾಧನೆ ಮಾಡಿಲ್ಲ. ಅಫ್ಗಾನಿಸ್ತಾನದ ರಶೀದ್ ಖಾನ್ 108 ಪಂದ್ಯಗಳಲ್ಲಿ 182 ವಿಕೆಟ್‌ ಹಾಗೂ 602 ರನ್‌ಗಳನ್ನು ಗಳಿಸಿದ್ದಾರೆ. ಸದ್ಯ, ಈ ದಾಖಲೆಗೆ ಅತ್ಯಂತ ಸಮೀಪವಿರುವ ಆಟಗಾರ ಇವರು ಮಾತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.