ADVERTISEMENT

ಒಂದೇ ಫ್ರೇಮ್‌ನಲ್ಲಿ ಧೋನಿ–ಗಂಭೀರ್: ಪಂತ್ ತಂಗಿ ಮದುವೆಯಲ್ಲಿ ಮಿಂಚಿದ ಕ್ರಿಕೆಟಿಗರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2025, 10:32 IST
Last Updated 13 ಮಾರ್ಚ್ 2025, 10:32 IST
<div class="paragraphs"><p>ರಿಷಬ್ ಪಂತ್‌ ಸಹೋದರಿ ಮದುವೆಯಲ್ಲಿ ಧೋನಿ ಮತ್ತು ಗೌತಮ್‌ ಗಂಭೀರ್</p></div>

ರಿಷಬ್ ಪಂತ್‌ ಸಹೋದರಿ ಮದುವೆಯಲ್ಲಿ ಧೋನಿ ಮತ್ತು ಗೌತಮ್‌ ಗಂಭೀರ್

   

ಚಿತ್ರ: ಇನ್‌ಸ್ಟಾಗ್ರಾಂ

ಮಸೂರಿ(ಉತ್ತರಾಖಂಡ): ಬ್ಯಾಟರ್‌– ವಿಕೆಟ್‌ ಕೀಪರ್ ರಿಷಬ್‌ ಪಂತ್ ಸಹೋದರಿಯ ಮದುವೆಯಲ್ಲಿ ಟೀಮ್‌ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಒಂದೇ ಫ್ರೇಮ್‌ನಲ್ಲಿ ನಿಂತು ಫೋಟೊಗೆ ಪೋಸ್‌ ನೀಡಿದ್ದು, ಕ್ರಿಕೆಟ್‌ ಪ್ರೇಮಿಗಳ ಹುಬ್ಬೇರುವಂತೆ ಮಾಡಿದ್ದಾರೆ.

ADVERTISEMENT

ಉತ್ತರಾಖಂಡದ ಮಸೂರಿಯಲ್ಲಿ ರಿಷಬ್ ಪಂತ್ ಸಹೋದರಿ ಸಾಕ್ಷಿ ಪಂತ್ ಅವರ ಮದುವೆ ಸಮಾರಂಭ ನಡೆದಿತ್ತು. ಮಂಗಳವಾರವೇ ಪತ್ನಿಯೊಂದಿಗೆ ಆಗಮಿಸಿದ ಧೋನಿ, ಮೆಹಂದಿ ಮತ್ತು ಸಂಗೀತ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೌತಮ್‌ ಗಂಭೀರ್ ಅವರು ಬುಧವಾರ ಮದುವೆ ಸಮಾರಂಭಕ್ಕೆ ಬಂದಿದ್ದರು.

ಫೋಟೊ ಜರ್ನಲಿಸ್ಟ್ ಪಲ್ಲವ್ ಪಾಲಿವಾಲ್‌ ಎಂಬವರು ಪಂತ್ ಮತ್ತು ಅವರ ಕುಟುಂಬದೊಂದಿಗೆ ಗಂಭೀರ್ ಮತ್ತು ಧೋನಿ ನಿಂತಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಇದೀಗ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

2007ರ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್‌ ಪಂದ್ಯಗಳಲ್ಲಿ ಭಾರತ ತಂಡ ಟ್ರೋಫಿ ಎತ್ತಿಹಿಡಿಯುವಲ್ಲಿ ಈ ಇಬ್ಬರು ಆಟಗಾರರು ಪ್ರಮುಖ ಪಾತ್ರವಹಿಸಿದ್ದರು. ಅದಾಗ್ಯೂ ಆ ದಿನಗಳಲ್ಲಿ ಇಬ್ಬರ ನಡುವಿನ ಸಂಬಂಧ ಉತ್ತಮವಾಗಿರಲಿಲ್ಲ ಎಂದು ಹೇಳಲಾಗುತ್ತಿತ್ತು.

ಈ ಊಹಾಪೋಹಗಳಿಗೆ ಪುಷ್ಠಿ ನೀಡುವಂತೆ ಧೋನಿ ಅವರ ವಿರುದ್ಧ ಗಂಭೀರ್ ಬಹಿರಂಗವಾಗಿಯೇ ಹೇಳಿಕೆಗಳನ್ನು ನೀಡುತ್ತಿದ್ದರು. ‘2011ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯವನ್ನು ಗೆಲ್ಲಲ್ಲು ಧೋನಿ ಒಬ್ಬರೇ ಕಾರಣರಲ್ಲ’ ಎಂದು ಅಸಮಾಧಾನವನ್ನೂ ಹೊರಹಾಕಿದ್ದರು.

ಕಳೆದ ವರ್ಷ ಕೆಕೆಆರ್ ಮತ್ತು ಚೆನ್ನೈ ನಡುವಿನ ಐಪಿಎಲ್‌ ಪಂದ್ಯದ ವೇಳೆ ಧೋನಿ ಅವರನ್ನು ಗಂಭೀರ್‌ ತಬ್ಬಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು.

ಪಂತ್ ಸಹೋದರಿ ಸಾಕ್ಷಿ ಅವರು ಉದ್ಯಮಿ ಅಂಕಿತ್ ಚೌಧರಿ ಅವರನ್ನು ಬುಧವಾರ ವಿವಾಹವಾಗಿದ್ದಾರೆ. ಕ್ರಿಕೆಟಿಗರಾದ ಸುರೇಶ್‌ ರೈನಾ, ನಿತೀಶ್‌ ರಾಣಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.