ಧ್ರುವ ಜುರೇಲ್ ಬ್ಯಾಟಿಂಗ್ ವೈಖರಿ
ಕೃಪೆ: ಪಿಟಿಐ
ಅಹಮದಾಬಾದ್: ವೆಸ್ಟ್‌ಇಂಡೀಸ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಆತಿಥೇಯ ಭಾರತ ಬೃಹತ್ ಮುನ್ನಡೆಯತ್ತ ಹೆಜ್ಜೆ ಇಟ್ಟಿದೆ.
ಅನುಭವಿಗಳಾದ ಕೆ.ಎಲ್. ರಾಹುಲ್, ರವೀಂದ್ರ ಜಡೇಜ ಹಾಗೂ ಯುವ ಆಟಗಾರ ಧ್ರುವ ಜುರೇಲ್ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ನಾಯಕ ಶುಭಮನ್ ಗಿಲ್ (50 ರನ್) ಅವರೂ ಜವಾಬ್ದಾರಿಯುತ ಅರ್ಧಶತಕ ಗಳಿಸಿದ್ದರ ಫಲವಾಗಿ ಟೀಂ ಇಂಡಿಯಾ, ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 448 ರನ್ ಗಳಿಸಿದೆ.
ಗುರುವಾರ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವಿಂಡೀಸ್ ಪಡೆ, ಮೊಹಮದ್ ಸಿರಾಜ್ (4 ವಿಕೆಟ್) ಹಾಗೂ ಜಸ್‌ಪ್ರೀತ್ ಬೂಮ್ರಾ (3 ವಿಕೆಟ್) ದಾಳಿ ಎದುರು ತತ್ತರಿಸಿತು. ಅವರಿಗೆ ಕುಲದೀಪ್ ಯಾದವ್ (2 ವಿಕೆಟ್) ಮತ್ತು ವಾಷಿಂಗ್ಟನ್ ಸುಂದರ್ (1 ವಿಕೆಟ್) ಕೂಡ ಉತ್ತಮ ಸಹಕಾರ ನೀಡಿದರು. ಹೀಗಾಗಿ, ಪ್ರವಾಸಿ ಪಡೆ 162 ರನ್ ಗಳಿಸಿ ಮೊದಲ ದಿನವೇ ಆಲೌಟ್ ಆಯಿತು.
ಭಾರತ ಸದ್ಯ 286 ರನ್‌ಗಳ ಮುನ್ನಡೆ ಸಾಧಿಸಿದೆ.
ತ್ರಿವಳಿ ಶತಕ
ಎರಡನೇ ದಿನದಾಟದ ಊಟದ ವಿರಾಮಕ್ಕೂ ಮೊದಲೇ ರಾಹುಲ್ ಶತಕದ ಸಾಧನೆ ಮಾಡಿದರು. ಇದರೊಂದಿಗೆ, ತವರಿನಲ್ಲಿ ಬರೋಬ್ಬರಿ 9 ವರ್ಷಗಳ (3,211 ದಿನಗಳ) ಬಳಿಕ ಮೂರಂಕಿ ಮುಟ್ಟಿದ ಸಂಭ್ರಮ ಆಚರಿಸಿದರು.
ರಾಹುಲ್ ಅವರಂತೆಯೇ ದಿಟ್ಟ ಆಟವಾಡಿದ ಜುರೇಲ್ ಮತ್ತು ಜಡೇಜ ದಿನದಾಟದ ಅಂತಿಮ ಅವಧಿಯಲ್ಲಿ ಶತಕ ಗಳಿಸಿದರು. ಜಡೇಜಗೆ ಟೆಸ್ಟ್ ಮಾದರಿಯಲ್ಲಿ ಇದು 6ನೇ ಶತಕವಾದರೆ, ಜುರೇಲ್‌ಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕವಾಗಿದೆ.
197 ಎಸೆತಗಳನ್ನು ಎದುಸಿರಿದ ರಾಹುಲ್, 12 ಬೌಂಡರಿ ಸಹಿತ 100 ರನ್ ಗಳಿಸಿದ್ದಾಗ ಔಟಾದರೆ, ಜುರೇಲ್ 210 ಎಸೆತಗಳಲ್ಲಿ 15 ಬೌಂಡರಿ, 3 ಸಿಕ್ಸರ್ ಸಹಿತ 125 ರನ್ ಗಳಿಸಿದ್ದಾಗ ಪೆವಿಲಿಯನ್ ಸೇರಿಕೊಂಡರು. 176 ಎಸೆತಗಳಲ್ಲಿ 102 ರನ್ ಗಳಿಸಿರುವ ಜಡೇಜ, ಮೂರನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.
12ನೇ ಆಟಗಾರ ಜುರೇಲ್
ಭಾರತ ಪರ ಟೆಸ್ಟ್ ಮಾದರಿಯಲ್ಲಿ ಶತಕ ಬಾರಿಸಿದ 12ನೇ ವಿಕೆಟ್ ಕೀಪರ್ ಬ್ಯಾಟರ್ ಎಂಬ ಶ್ರೇಯ ಜುರೇಲ್ ಅವರದ್ದಾಯಿತು. ಅಷ್ಟೇ ಅಲ್ಲ. ಇಷ್ಟು ಬ್ಯಾಟರ್‌ಗಳ ಪೈಕಿ ತಮ್ಮ ಮೊದಲ ಶತಕವನ್ನು ವಿಂಡೀಸ್ ವಿರುದ್ಧವೇ ಗಳಿಸಿದ ಐದನೇ ಆಟಗಾರ ಎನಿಸಿಕೊಂಡರು.
ಜುರೇಲ್‌ಗಿಂತ ಮೊದಲು ವಿಜಯ್ ಮಂಜ್ರೇಕರ್, ಫಾರೂಖ್ ಎಂಜಿನಿಯರ್, ಅಜಯ್ ರಾತ್ರಾ, ವೃದ್ಧಿಮಾನ್ ಸಾಹ ವಿಂಡೀಸ್ ವಿರುದ್ಧದ ಪಂದ್ಯದ ಮೂಲಕ ಚೊಚ್ಚಲ ಶತಕದ ಸವಿಯುಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.