
ಡಾನ್ ಬ್ರಾಡ್ಮನ್ ಟೋಪಿ
ಚಿತ್ರ: @PictureSporting
ಕ್ರಿಕೆಟ್ ದಂತಕತೆ ಡಾನ್ ಬ್ರಾಡ್‌ಮನ್ ಅವರು ಕ್ರಿಕೆಟ್ ಲೋಕದಲ್ಲಿ ಅನೇಕ ಮುರಿಯಲಾಗದ ದಾಖಲೆಗಳನ್ನು ಮಾಡಿದ್ದಾರೆ. ಅವರು 1947-48ರ ಅವಧಿಯಲ್ಲಿ ಭಾರತ ತಂಡದ ವಿರುದ್ಧ ನಡೆದ ಟೆಸ್ಟ್ ಸರಣಿಯಲ್ಲಿ ಧರಿಸಿದ್ದ ಹಸಿರು ಬಣ್ಣದ ಬ್ಯಾಗಿ ಟೋಪಿ (Green Baggy) ಸಾರ್ವಜನಿಕ ಹರಾಜಿಗೆ ಬಂದಿದೆ.
ಈ ಟೋಪಿ ಹರಾಜು ಪ್ರಕ್ರಿಯೆ, ಸಂಗ್ರಹಕಾರರು ಮತ್ತು ವಸ್ತು ಸಂಗ್ರಹಾಲಯಗಳಿಂದ ಜಾಗತಿಕ ಆಸಕ್ತಿ ಸೆಳೆಯುವ ನಿರೀಕ್ಷೆಯಿದೆ. ಕ್ರಿಕೆಟ್‌ನ ಅತ್ಯಂತ ಅಮೂಲ್ಯ ಕಲಾಕೃತಿಗಳಲ್ಲಿ ಒಂದಾಗಿರುವ ಈ ಕ್ಯಾಪ್, ಬ್ರಾಡ್ಮನ್ ಅವರು ಭಾರತೀಯ ಕ್ರಿಕೆಟಿಗ ಶ್ರೀರಂಗ ವಾಸುದೇವ್ ಸೊಹೊ ಅವರಿಗೆ ನೀಡಿದ ಉಡುಗೊರೆಯಾಗಿದೆ. ಸದ್ಯ, ಆ ಕ್ಯಾಪ್ 75 ವರ್ಷಗಳಿಗೂ ಹೆಚ್ಚು ಕಾಲ ಶ್ರೀರಂಗ ಕುಟುಂಬದವರ ಜೊತೆಗಿದೆ.
1947–48 ರ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡ ಸ್ವಾತಂತ್ರ್ಯ ಬಳಿಕ ಮೊದಲ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಈ ಪ್ರವಾಸದಲ್ಲಿ ಬ್ರಾಡ್‌ಮನ್ ಅವರು ಭಾರತ ತಂಡದ ವಿರುದ್ಧ ತಮ್ಮ ವೃತ್ತಿ ಜೀವನದ ಏಕೈಕ ಟೆಸ್ಟ್ ಸರಣಿ ಆಡಿದ್ದರು. ಈ ಪ್ರವಾಸದಲ್ಲಿ ಭಾರತ ತಂಡ 4-0 ಅಂತರದಲ್ಲಿ ಸೋಲು ಅನುಭವಿಸಿತ್ತು.
ಅಂದಹಾಗೆ, 1947–48ರ ಅವಧಿಯಲ್ಲಿ ಆಸ್ಟ್ರೇಲಿಯಾದ ಪ್ರತೀ ಆಟಗಾರರಿಗೆ ‘ಹಸಿರು ಬಣ್ಣದ ಟೋಪಿ’ಗಳನ್ನು ನೀಡಲಾಗುತ್ತಿತ್ತು. ಹಾಗಾಗಿ ಪಂದ್ಯದ ಸಂದರ್ಭದಲ್ಲಿ ಬ್ರಾಡ್‌ಮನ್ ಧರಿಸುತ್ತಿದ್ದ ಟೋಪಿಗಳು ಈಗ ಬೇರೆ ಬೇರೆ ವಸ್ತು ಸಂಗ್ರಹಾಲಯಗಳಲ್ಲಿವೆ.
ಅಂದು ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದ ಶ್ರೀರಂಗ ವಾಸುದೇವ್ ಸೊಹೊ ಅವರಿಗೆ ಸರಣಿ ಮುಗಿದ ಬಳಿಕ ಡಾನ್ ಬ್ರಾಡ್‌ಮನ್ ಅವರು, ತಾವು ಧರಿಸಿದ್ದ ಹಸಿರು ಬಣ್ಣದ ಟೋಪಿಯನ್ನು ಉಡುಗೊರೆಯಾಗಿ ನೀಡಿದ್ದರು. ಅಂದಿನಿಂದ, ಈ ಟೋಪಿ ವಾಸುದೇವ್ ಅವರ ಕುಟುಂಬದ ಜೊತೆಗಿದೆ.
ಸದ್ಯ, ಆಸ್ಟ್ರೇಲಿಯಾದ ಪ್ರಮುಖ ಹರಾಜುದಾರರಾಗಿರುವ ಲಾಯ್ಡ್ ಅವರು ಈ ಟೋಪಿಯನ್ನು ಹರಾಜಿಗೆ ಇಡುತ್ತಿದ್ದಾರೆ. ಇದರ ಆರಂಭಿಕ ಬೆಲೆ 1 ಆಸ್ಟ್ರೇಲಿಯನ್ ಡಾಲರ್ ಆಗಿದೆ. ಈ ಹರಾಜು ಪ್ರಕ್ರಿಯೆ ಜನವರಿ 26 ರವರೆಗೆ ಮುಂದುವರಿಯಲಿದ್ದು, ಎಷ್ಟು ಮೊತ್ತಕ್ಕೆ ಹರಾಜಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.