ADVERTISEMENT

ದುಲೀಪ್ ಟ್ರೋಫಿ: ಕೇಂದ್ರ ವಲಯದ ವಿಜಯಕ್ಕೆ ಅಲ್ಪಮೊತ್ತದ ಗುರಿ!

ಅಂಕಿತ್, ಸಿದ್ಧಾರ್ಥ್ ಸೊಗಸಾದ ಬ್ಯಾಟಿಂಗ್‘ ಪವಾಡದ ನಿರೀಕ್ಷೆಯಲ್ಲಿ ದಕ್ಷಿಣ ವಲಯ

ಗಿರೀಶ ದೊಡ್ಡಮನಿ
Published 14 ಸೆಪ್ಟೆಂಬರ್ 2025, 20:30 IST
Last Updated 14 ಸೆಪ್ಟೆಂಬರ್ 2025, 20:30 IST
<div class="paragraphs"><p>ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸೆಲೆನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ನಾಲ್ಕನೇ ದಿನದ ಆಟದಲ್ಲಿ ಕೇಂದ್ರ ವಲಯದ ವಿರುದ್ಧ ದಕ್ಷಿಣ ವಲಯದ ಅಂಕಿತ್ ಶರ್ಮ ಮತ್ತು ಆಂಡ್ರೆ ಸಿದ್ಧಾರ್ಥ್ ಶತಕದ ಜೊತೆಯಾಟದಲ್ಲಿ ಭಾಗಿಯಾದರು. </p></div>

ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸೆಲೆನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ದುಲೀಪ್ ಟ್ರೋಫಿ ಫೈನಲ್ ಪಂದ್ಯದ ನಾಲ್ಕನೇ ದಿನದ ಆಟದಲ್ಲಿ ಕೇಂದ್ರ ವಲಯದ ವಿರುದ್ಧ ದಕ್ಷಿಣ ವಲಯದ ಅಂಕಿತ್ ಶರ್ಮ ಮತ್ತು ಆಂಡ್ರೆ ಸಿದ್ಧಾರ್ಥ್ ಶತಕದ ಜೊತೆಯಾಟದಲ್ಲಿ ಭಾಗಿಯಾದರು.

   

ಪ್ರಜಾವಾಣಿ ಚಿತ್ರ : ಪ್ರಶಾಂತ್ ಎಚ್.ಜಿ.

ಬೆಂಗಳೂರು: ಛಲ, ತಾಳ್ಮೆ ಮತ್ತು ಏಕಾಗ್ರತೆಯ ಆಟದ ಮೂಲಕ ಅಂಕಿತ್ ಶರ್ಮಾ ಹಾಗೂ ಆ್ಯಂಡ್ರೆ ಸಿದ್ಧಾರ್ಥ್ ಅವರು ದಕ್ಷಿಣ ವಲಯದ ದುಲೀಪ್ ಟ್ರೋಫಿ ಜಯದ ಆಸೆಯನ್ನು  ಜೀವಂತವಾಗಿಡುವ ಎಲ್ಲ ಪ್ರಯತ್ನಗಳನ್ನು ಭಾನುವಾರ ಮಾಡಿದರು.

ADVERTISEMENT

ಆದರೆ ಫೈನಲ್ ಪಂದ್ಯದ ನಾಲ್ಕನೇ ದಿನದಾಟದ ಕೊನೆಯಲ್ಲಿ ಅವರೆಲ್ಲ ಪ್ರಯತ್ನಗಳೂ ನೇಪಥ್ಯಕ್ಕೆ ಸರಿದವು. ಕೇಂದ್ರ ವಲಯ ತಂಡಕ್ಕೆ 11 ವರ್ಷಗಳ ನಂತರ ಟ್ರೋಫಿ ಜಯಿಸುವ ಅವಕಾಶ ಸೃಷ್ಟಿಯಾಯಿತು. ಪಂದ್ಯದ ಕೊನೆಯ ದಿನವಾದ ಸೋಮವಾರ 65 ರನ್‌ಗಳ ಅಲ್ಪಮೊತ್ತದ ಗುರಿಯನ್ನು ಮುಟ್ಟಿದರೆ ರಜತ್ ಪಾಟೀದಾರ್ ಬಳಗವು ಟ್ರೋಫಿಗೆ ಮುತ್ತಿಡಲಿದೆ. 

ಆದರೆ, ‘ಕ್ರಿಕೆಟ್‌ನಲ್ಲಿ ಕೊನೆ ಕ್ಷಣದವರೆಗೂ ಏನೂ ಹೇಳಲು ಸಾಧ್ಯವಿಲ್ಲ’ ಎಂಬಹೇಳಿಕೆಯನ್ನು ಪರಿಗಣಿಸುವುದೇ ಆದರೆ, ದಕ್ಷಿಣ ವಲಯವು ಈ ಅಲ್ಪಮೊತ್ತವನ್ನು ರಕ್ಷಿಸಿಕೊಂಡು ಕೇಂದ್ರದ ಎಲ್ಲ ವಿಕೆಟ್‌ಗಳನ್ನು (1961ರಲ್ಲಿ ಉತ್ತರ ವಲಯವು 48 ರನ್‌ಗಳಿಗೆ ಆಲೌಟ್ ಆಗಿತ್ತು. ದುಲೀಪ್ ಟ್ರೋಫಿ ಇತಿಹಾಸದಲ್ಲಿ ಅತಿ ಕಡಿಮೆ ಇನಿಂಗ್ಸ್‌ ಮೊತ್ತದ ಆ ದಾಖಲೆ ಈಗಲೂ ಇದೆ)  ಕಬಳಿಸಬೇಕು. 

ಆದರೂ ಪಂದ್ಯ ನಡೆಯುತ್ತಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಮೈದಾನದ ಪಿಚ್ ಕೊನೆಯ ದಿನದಾಟದಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆ ಅಲ್ಲಗಳೆಯಲಾಗದು. ಅಲ್ಲದೇ ಕಳೆದ ಮೂರು ದಿನಗಳಿಂದ ಬ್ಯಾಟರ್‌ಗಳ ಸ್ನೇಹಿಯೂ ಆಗಿತ್ತು ಈ ಅಂಗಳ. ಆದರೆ, ದಕ್ಷಿಣ ತಂಡದಲ್ಲಿ ಇರುವುದು ಅಂಕಿತ್ ಶರ್ಮಾ ಒಬ್ಬರೇ ಪರಿಣತ ಸ್ಪಿನ್ನರ್‌. 

ಎಡಗೈ ಸ್ಪಿನ್‌–ಆಲ್‌ರೌಂಡರ್ ಅಂಕಿತ್  (99;169ಎ, 4X13, 6X1) ಬ್ಯಾಟಿಂಗ್‌ನಲ್ಲಿ ಮಿಂಚಿದರು. ಕೇವಲ 1 ರನ್‌ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡರು. ಆದರೆ, ಅವರು 19 ವರ್ಷದ ಆ್ಯಂಡ್ರೆ ಸಿದ್ಧಾರ್ಥ್ (ಔಟಾಗದೇ  84; 190ಎ, 4X7) ಜೊತೆಗೂಡಿ 7ನೇ ವಿಕೆಟ್ ಜೊತೆಯಾಟದಲ್ಲಿ 192 ರನ್‌ ಕಲೆಹಾಕಿದರು. ಇದರಿಂದಾಗಿ ದಕ್ಷಿಣ ವಲಯ ತಂಡವು ದಿನದಾಟದ ಮುಕ್ತಾಯಕ್ಕೆ 121 ಓವರ್‌ಗಳಲ್ಲಿ 426 ರನ್ ಗಳಿಸಿತು. 64 ರನ್‌ಗಳ ಮುನ್ನಡೆ ಗಳಿಸಿತು.

ಕೇಂದ್ರ ವಲಯವು ಮೊದಲ ಇನಿಂಗ್ಸ್‌ನಲ್ಲಿ 335 ರನ್‌ಗಳ ಮುನ್ನಡೆ ಗಳಿಸಿತ್ತು. ಅದಕ್ಕುತ್ತರವಾಗಿ ಶನಿವಾರ ದಿನದಾಟದ ಕೊನೆಗೆ ದಕ್ಷಿಣ ತಂಡವು ಎರಡು ವಿಕೆಟ್‌ಗಳೀಗೆ 129 ರನ್ ಗಳಿಸಿತ್ತು. ಭಾನುವಾರ ಆಟ ಮುಂದುವರಿಸಿದ ತಂಡಕ್ಕೆ ಕನ್ನಡಿಗ ಆರ್. ಸ್ಮರಣ್ (67; 118ಎ) ಮತ್ತು ರಿಕಿ ಭುಯ್ (45; 85ಎ) ಮೂರನೇ ವಿಕೆಟ್ ಜೊತೆಯಾಟದಲ್ಲಿ 85 ರನ್ ಸೇರಿಸಿದರು.  ಅಕ್ಷಯ್ ವಾಡಕರ್ ಅವರು ಕ್ಯಾಚ್ ಕೈಚೆಲ್ಲಿದ್ದರಿಂದ  ಸ್ಮರಣ್ ಅವರಿಗೆ ಜೀವದಾನ ಲಭಿಸಿತು.

ವೇಗಿ ದೀಪಕ್ ಚಾಹರ್ ಅವರು ರಿಕಿ ವಿಕೆಟ್ ಗಳಿಸಿ ಜೊತೆಯಾಟ ಮುರಿದರು. ಮೊಹಮ್ಮದ್ ಅಜರುದ್ದೀನ್ (27; 40ಎ) ಅವರಿಗೂ ಎರಡು ಜೀವದಾನ ದೊರೆತವು. ಆದರೆ ಅವರು ಹೆಚ್ಚು ಹೊತ್ತು ಆಡದಂತೆ ಕುಮಾರ್ ಕಾರ್ತಿಕೇಯ (110ಕ್ಕೆ4) ನೋಡಿಕೊಂಡರು. ಕುಮಾರ್ ಅವರು ನಂತರ  ಸ್ಮರಣ್ ವಿಕೆಟ್ ಕೂಡ ಗಳಿಸಿದರು. ನಂತರದ ಅವಧಿಯಲ್ಲಿ  ಸಿದ್ಧಾರ್ಥ್ ಮತ್ತು ಅಂಕಿತ್ ಅವರು ಸೊಗಸಾದ ಬ್ಯಾಟಿಂಗ್ ಮಾಡಿದರು.  ಆದರೆ  99 ರನ್ ಗಳಿಸಿದ್ದ ಅಂಕಿತ್ ಕುಮಾರ್ ಕಾರ್ತಿಕೆಯ ಅವರ ಎಸೆತದ ತಿರುವನ್ನು ತಪ್ಪಾಗಿ ಅಂದಾಜಿಸಿ ಹೊಡೆತ ಪ್ರಯೋಗಿಸಿದರು. ರಜತ್ ಪಾಟೀದಾರ್ ಕ್ಯಾಚ್ ಪಡೆದರು.  ಅದರ ನಂತರ  ಸಾರಾಂಶ್ ಜೈನ್ (130ಕ್ಕೆ3)ಮತ್ತು ಕುಮಾರ ಸ್ಪಿನ್ ಮೋಡಿಗೆ ಉಳಿದ ಬ್ಯಾಟರ್‌ಗಳೂ ಬೇಗನೆ ವಿಕೆಟ್ ಒಪ್ಪಿಸಿದರು. ಇದರಿಂದಾಗಿ ಕೇಂದ್ರ ತಂಡಕ್ಕೆ ದೊಡ್ಡ ಗುರಿಯನ್ನೊಡ್ಡುವ ದಕ್ಷಿಣದ ಯೋಜನೆ ಕೈಗೂಡಲಿಲ್ಲ. 

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್

ದಕ್ಷಿಣ ವಲಯ: 63 ಓವರ್‌ಗಳಲ್ಲಿ 149. ಕೇಂದ್ರ ವಲಯ:145.1 ಓವರ್‌ಗಳಲ್ಲಿ 511

ಎರಡನೇ ಇನಿಂಗ್ಸ್

ದಕ್ಷಿಣ ವಲಯ: 121 ಓವರ್‌ಗಳಲ್ಲಿ 426 (ಆರ್‌. ಸ್ಮರಣ್ 67 ರಿಕಿ ಭುಯ್ 45 ಮೊಹಮ್ಮದ್ ಅಜರುದ್ದೀನ್ 27 ಆ್ಯಂಡ್ರೆ ಸಿದ್ಧಾರ್ಥ್ ಬ್ಯಾಟಿಂಗ್ 84 ಅಂಕಿತ್ ಶರ್ಮಾ 99 ಕುಮಾರ್ ಕಾರ್ತಿಕೇಯ 110ಕ್ಕೆ4 ಸಾರಾಂಶ್ ಜೈನ್ 130ಕ್ಕೆ3 ದೀಪಕ್ ಚಾಹರ್ 74ಕ್ಕೆ1 ಕುಲದೀಪ್ ಸೇನ್ 60ಕ್ಕೆ1)

ಕೇಂದ್ರ ವಲಯಕ್ಕೆ 64 ರನ್‌ ಗೆಲುವಿನ ಗುರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.