ADVERTISEMENT

ದುಲೀಪ್ ಟ್ರೋಫಿ ಸೆಮಿಫೈನಲ್: ದಕ್ಷಿಣ ವಲಯ ಬೃಹತ್ ಮೊತ್ತ

ದ್ವಿಶತಕ ತಪ್ಪಿಸಿಕೊಂಡ ಜಗದೀಶನ್

ಗಿರೀಶ ದೊಡ್ಡಮನಿ
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
<div class="paragraphs"><p>ದಕ್ಷಿಣ ವಲಯ ತಂಡದ ಎನ್. ಜಗದೀಶನ್ ಮತ್ತು ರಿಕಿ ಭುಯ್</p></div>

ದಕ್ಷಿಣ ವಲಯ ತಂಡದ ಎನ್. ಜಗದೀಶನ್ ಮತ್ತು ರಿಕಿ ಭುಯ್

   

ಪಿಟಿಐ ಚಿತ್ರಗಳು

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್ ಅವರ ಎದುರು ದ್ವಿಶತಕ ಸಂಭ್ರಮ ಆಚರಿಸುವ ನಾರಾಯಣ ಜಗದೀಶನ್ ಕನಸು ಕೈಗೂಡಲಿಲ್ಲ. ಕೇವಲ ಮೂರು ರನ್‌ಗಳ ಅಂತರದಲ್ಲಿ ಅವರು ಈ ಅವಕಾಶದಿಂದ ವಂಚಿತರಾದರು. 

ADVERTISEMENT

ನಗರದ ಹೊರವಲಯದ ಸಿಂಗಹಳ್ಳಿಯಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಸೆಮಿಫೈನಲ್ ಎರಡನೇ ದಿನದಾಟದಲ್ಲಿ ಜಗದೀಶನ್ (197; 352ಎ, 4X16, 6X2) ಅವರು ರನೌಟ್ ಆಗುವುದರೊಂದಿಗೆ ಅಮೋಘ ಇನಿಂಗ್ಸ್‌ಗೆ ತೆರೆಬಿತ್ತು. ಆದರೆ ಅವರ ನಂತರವೂ ಉಳಿದ ಬ್ಯಾಟರ್‌ಗಳು ದಕ್ಷಿಣ ವಲಯದ ರನ್‌ ಬೇಟೆಯನ್ನು ಮುಂದುವರಿಸಿದರು. ಇದರಿಂದಾಗಿ ಉತ್ತರ ವಲಯದ ಆಟಗಾರರು ಸತತ ಎರಡನೇ ದಿನ  ಮೈದಾನದಲ್ಲಿ ಬೆವರು ಹರಿಸಬೇಕಾಯಿತು. 

ಹದವಾದ ಬಿಸಿಲು ಹರಡಿದ್ದ ಶುಕ್ರವಾರದ ದಿನದಾಟದ ಮುಕ್ತಾಯಕ್ಕೆ ದಕ್ಷಿಣ ವಲಯವು 169.2 ಓವರ್‌ಗಳಲ್ಲಿ 536 ರನ್‌ಗಳ  ಬೃಹತ್  ಮೊತ್ತ ಗಳಿಸಿತು. ಗುರುವಾರ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು ಎಷ್ಟು ದೊಡ್ಡ ತಪ್ಪು ಎಂದು ಉತ್ತರ ವಲಯದ ನಾಯಕ ಅಂಕಿತ್ ಕುಮಾರ್ ಪರಿತಪಿಸುವಂತೆ ದಕ್ಷಿಣ ವಲಯದ ಬ್ಯಾಟರ್‌ಗಳು ಮಾಡಿದರು. ಮೊದಲ ದಿನದಾಟದಲ್ಲಿ ತಂಡವು  81 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 297 ರನ್ ಗಳಿಸಿತ್ತು. ಶತಕ ಗಳಿಸಿದ್ದ ಜಗದೀಶನ್ (148 ರನ್) ಮತ್ತು ನಾಯಕ ಮೊಹಮ್ಮದ್ ಅಜರುದ್ದೀನ್  (11 ರನ್) ಕ್ರೀಸ್‌ನಲ್ಲಿದ್ದರು. 

ಎರಡನೇ ದಿನದ ಮೊದಲ ಓವರ್‌ ಹಾಕಿ ಅನ್ಷುಲ್ ಕಾಂಬೋಜ್ ಅವರ  ಎರಡನೇ ಎಸೆತದಲ್ಲಿಯೇ ಅಜರುದ್ದೀನ್ ಅವರು ನಿಶಾಂತ್ ಸಿಂಧು ಪಡೆದ ಅಮೋಘ ಕ್ಯಾಚ್‌ಗೆ ನಿರ್ಗಮಿಸಿದರು. ಕ್ರೀಸ್‌ಗೆ ಬಂದ ರಿಕಿ ಭುಯ್ ಅವರೊಂದಿಗೆ ಜಗದೀಶನ್ ಜೊತೆಯಾಟ ಬೆಸೆದರು. ಐದನೇ ವಿಕೆಟ್ ಜೊತೆಯಾಟದಲ್ಲಿ 87 ರನ್ (194ಎ) ಸೇರಿಸಿದರು.  ಜಗದೀಶನ್ 161 ರನ್ ಗಳಿಸಿದ್ದ ಸಂದರ್ಭದಲ್ಲಿ ಸ್ಲಿಪ್‌ ಫೀಲ್ಡರ್ ನಿಶಾಂತ್ ಕ್ಯಾಚ್ ಕೈಚೆಲ್ಲಿ ‘ಜೀವದಾನ’ ನೀಡಿದ್ದರು.  

ಆದರೆ ಊಟದ ವಿರಾಮಕ್ಕೆ ಇನ್ನೇನು ಮೂರೇ ನಿಮಿಷಗಳು ಬಾಕಿಯಿದ್ದವು. ಮಯಂಕ್ ದಾಗರ್ ಎಸೆತವನ್ನು ಪಾಯಿಂಟ್‌ನತ್ತ ಹೊಡೆದ ರಿಕಿ ಒಂಟಿ ರನ್ ಪಡೆಯಲು ಮುಂದಡಿಯಿಟ್ಟು ಕ್ಷಣಾರ್ಧದಲ್ಲಿ ಮನಸ್ಸು ಬದಲಿಸಿ ಹಿಂದೆ ಬಂದರು. ಆದರೆ ನಾನ್‌ಸ್ಟ್ರೈಕರ್‌ನಲ್ಲಿದ್ದ ಜಗದೀಶನ್ ವೇಗವಾಗಿ ಓಡಿ ರಿಕಿ ಪಕ್ಕದಲ್ಲಿ ಬಂದುಬಿಟ್ಟಿದ್ದರು!

ಫೀಲ್ಡರ್‌ಗಳು ಈ ಅವಕಾಶ ಬಿಡಲಿಲ್ಲ. ರನ್‌ಔಟ್ ಮಾಡಿ ಕೇಕೆ ಹಾಕಿದರು. ಕುಪಿತಗೊಂಡ ಜಗದೀಶನ್ ಅವರು ರಿಕಿಯತ್ತ ಹೊರಳಿ ಅಸಮಾಧಾನ ವ್ಯಕ್ತಪಡಿಸುತ್ತ ಡ್ರೆಸ್ಸಿಂಗ್‌ ರೂಮ್‌ನತ್ತ ನಡೆದರು. ಡಗ್‌ಔಟ್‌ನ ಕಂಬಕ್ಕೆ ಬ್ಯಾಟ್‌ನಿಂದ ಹೊಡೆದರು.

ರಿಕಿ–ತನಯ್ ಅರ್ಧಶತಕ: ಜಗದೀಶನ್ ನಿರ್ಗಮಿಸಿದಾಗ 37 ಗಳಿಸಿ ಆಡುತ್ತಿದ್ದ  ರಿಕಿ ಭುಯ್ (54; 131ಎ, 4X3, 6X2) ಅರ್ಧಶತಕದ ಗಡಿ ದಾಟಿದರು. ಸಲ್ಮಾನ್ ನಿಜಾರ್ ಅವರೊಂದಿಗೆ 6ನೇ ವಿಕೆಟ್ ಜೊತೆಯಾಟದಲ್ಲಿ 36 ರನ್ ಸೇರಿಸಿದರು.  

ಅವರು ಔಟಾದ ನಂತರ ಕ್ರೀಸ್‌ಗೆ ಬಂದ ತನಯ್ ತ್ಯಾಗರಾಜನ್ 116 ಎಸೆತಗಳಲ್ಲಿ 58 ರನ್ ಗಳಿಸಿದರು. ಇದರಿಂದಾಗಿ ತಂಡವು ದೊಡ್ಡ ಮೊತ್ತ ದಾಖಲಿಸಿತು. ದಿನದಾಟದ ಮುಕ್ತಾಯಕ್ಕೆ 22 ನಿಮಿಷ ಬಾಕಿಯಿದ್ದಾಗ ದಕ್ಷಿಣ ವಲಯ ಆಲೌಟ್ ಆಯಿತು. ನಿಶಾಂತ್ ಐದು ವಿಕೆಟ್ ಗಳಿಸಿದರು.

ಇನ್ನುಳಿದಿರುವ ಎರಡು ದಿನಗಳಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಗಳಿಸುವ ಕಠಿಣ ಸವಾಲು ಉತ್ತರ ವಲಯ ತಂಡದ ಮುಂದಿದೆ.

ಸಂಕ್ಷಿಪ್ತ ಸ್ಕೋರು: ಸೆಮಿಫೈನಲ್ 1: ಮೊದಲ ಇನಿಂಗ್ಸ್: ದಕ್ಷಿಣ ವಲಯ: 169.2 ಓವರ್‌ಗಳಲ್ಲಿ 536 (ಎನ್. ಜಗದೀಶನ್ 197 ರಿಕಿ ಭುಯ್ 54 ಸಲ್ಮಾನ್ ನಿಜಾರ್ 29 ತನಯ್ ತ್ಯಾಗರಾಜನ್ 58 ಗುರಜಪನೀತ್ 29 ವಿ. ಕೌಶಿಕ್ 11 ಅನ್ಷುಲ್ ಕಾಂಬೋಜ್ 67ಕ್ಕೆ2 ನಿಶಾಂತ್ ಸಿಂಧು 125ಕ್ಕೆ5) ವಿರುದ್ಧ ಉತ್ತರ ವಲಯ. ಸೆಮಿಫೈನಲ್ 2: ಮೊದಲ ಇನಿಂಗ್ಸ್: ಪಶ್ಚಿಮ ವಲಯ: 108 ಓವರ್‌ಗಳಲ್ಲಿ 438 (ತನುಷ್ ಕೋಟ್ಯಾನ್ 76 ಶಾರ್ದೂಲ್ ಠಾಕೂರ್ 64 ಖಲೀಲ್ ಅಹಮದ್ 82ಕ್ಕೆ2 ಸತೀಶ್ ಜೈನ್ 121ಕ್ಕೆ3 ಹರ್ಷ ದುಬೆ 118ಕ್ಕೆ3) ಕೇಂದ್ರ ವಲಯ: 67 ಓವರ್‌ಗಳಲ್ಲಿ2 ವಿಕೆಟ್‌ಗಳಿಗೆ 229 (ಆಯುಷ್ ಪಾಂಡೆ 40 ದನೀಶ್ ಮಾಳೆವರ್ 76 ಶುಭಂ ಶರ್ಮಾ ಬ್ಯಾಟಿಂಗ್ 60 ರಜತ್ ಪಾಟೀದಾರ್ ಬ್ಯಾಟಿಂಗ್ 47 ಅರ್ಜನ್ ನಾಗವಸ್ವಾಲಾ 15ಕ್ಕೆ1 ಧರ್ಮೆಂದ್ರಸಿಂಹ ಜಡೇಜ 38ಕ್ಕೆ1) 

ರಜತ್ ಬಳಗದ ದಿಟ್ಟ ಹೋರಾಟ

ದುಲೀಪ್ ಟ್ರೋಫಿ ಟೂರ್ನಿಯ ಎರಡನೇ ಸೆಮಿಫೈನಲ್‌ನಲ್ಲಿ ಪಶ್ಚಿಮ ವಲಯವು ಗಳಿಸಿರುವ ದೊಡ್ಡ ಮೊತ್ತಕ್ಕೆ ರಜತ್ ಪಾಟೀದಾರ ನಾಯಕತ್ವದ ಕೇಂದ್ರ ವಲಯ ತಂಡವು ದಿಟ್ಟ ಪ್ರತಿಕ್ರಿಯೆ ನೀಡಿದೆ.  ಪಶ್ವಿಮ ವಲಯ ತಂಡವು 108 ಓವರ್‌ಗಳಲ್ಲಿ 438 ರನ್ ಗಳಿಸಿತು. ಅದಕ್ಕುತ್ತರವಾಗಿ ಕೇಂದ್ರ ವಲಯವು ಉತ್ತಮ ಆರಂಭ ಮಾಡಿದ್ದು 2 ವಿಕೆಟ್‌ಗೆ 229 ರನ್ ಕಲೆಹಾಕಿದೆ. ಆಯುಷ್ ಪಾಂಡೆ (40; 59ಎ 4X8) ಮತ್ತು ದನೀಶ್ ಮಾಳೆವರ್ (76; 136ಎ 4X12 6X1) ಮೊದಲ ವಿಕೆಟ್ ಜೊತೆಯಾಟದಲ್ಲಿ 67 ರನ್ ಸೇರಿಸಿದರು. 18ನೇ ಓವರ್‌ನಲ್ಲಿ ಆಯುಷ್ ಪಾಂಡೆ ಔಟಾದ ನಂತರ ದನೀಶ್ ಮತ್ತು ಶುಭಂ ಶರ್ಮಾ ಎರಡನೇ ವಿಕೆಟ್ ಜೊತೆಯಾಟದಲ್ಲಿ 93 ರನ್ ಸೇರಿಸಿದರು. ಧರ್ಮೇಂದ್ರಸಿಂಹ ಜಡೇಜ ಅವರು ದನೀಶ್ ಅವರನ್ನು ಔಟ್ ಮಾಡಿ ಜೊತೆಯಾಟ ಮುರಿದರು.  ಆದರೆ ಶುಭಂ (ಬ್ಯಾಟಿಂಗ್ 60; 148ಎ) ಜೊತೆಗೂಡಿದ ನಾಯಕ ರಜತ್ (ಬ್ಯಾಟಿಂಗ್ 47; 59ಎ) ಇನಿಂಗ್ಸ್‌ಗೆ ಬಲ ತುಂಬಿದರು. ತಂಡಕ್ಕೆ ಮೊದಲ ಇನಿಂಗ್ಸ್‌ ಮೊತ್ತ ಚುಕ್ತಾ ಮಾಡಲು ಇನ್ನೂ 209 ರನ್‌ಗಳು ಬೇಕು. 

ನನ್ನ ಮತ್ತು ರಿಕಿ ನಡುವಿನ ಸಂವಹನದ ಲೋಪದಿಂದಾಗಿ ರನ್‌ಔಟ್ ಸಂಭವಿಸಿತು. ಇದೆಲ್ಲವೂ ಆಟದ ಭಾಗವಷ್ಟೇ. ಆ ಕ್ಷಣ ಬೇಸರವಾದರೂ ನಂತರ ಮರೆತು ಮುಂದುವರಿಯಬೇಕು.
-ಎನ್. ಜಗದೀಶನ್, ದಕ್ಷಿಣ ವಲಯದ ಬ್ಯಾಟರ್‌

ಪಂದ್ಯವನ್ನು ವೀಕ್ಷಿಸಿದ ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರಕರ್‌  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.