ADVERTISEMENT

ದುಲೀಪ್‌ ಟ್ರೋಫಿ: ದಕ್ಷಿಣ ವಲಯಕ್ಕೆ ಸೋಲುಣಿಸಿ ಪ್ರಶಸ್ತಿ ಗೆದ್ದ ಪಶ್ಚಿಮ ವಲಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2022, 8:41 IST
Last Updated 25 ಸೆಪ್ಟೆಂಬರ್ 2022, 8:41 IST
ಯಶಸ್ವಿ ಜೈಸ್ವಾಲ್‌
ಯಶಸ್ವಿ ಜೈಸ್ವಾಲ್‌   

ಕೊಯಮತ್ತೂರು: ಈ ಬಾರಿಯ ದುಲೀಪ್ ಟ್ರೋಫಿ ಟೆಸ್ಟ್‌ ಕ್ರಿಕೆಟ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಪಶ್ಚಿಮ ವಲಯ ತಂಡವು ದಕ್ಷಿಣ ವಲಯ ವಿರುದ್ಧ 294 ರನ್‌ ಅಂತರದ ಗೆಲುವು ದಾಖಲಿಸಿದೆ.

ಕೊಯಮತ್ತೂರಿನಲ್ಲಿ ನಡೆದ ಪಂದ್ಯದಲ್ಲಿ ಅಜಿಂಕ್ಯ ರಹಾನೆ ನೇತೃತ್ವದ ಪಶ್ಚಿಮ ವಲಯ, ಮೊದಲ ಇನಿಂಗ್ಸ್‌ನಲ್ಲಿ 270 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ದಕ್ಷಿಣ ವಲಯ 327 ರನ್‌ ಗಳಿಸಿ 57 ರನ್ ಅಂತರದ ಮುನ್ನಡೆ ಸಾಧಿಸಿತ್ತು.

ಅಲ್ಪ ಹಿನ್ನಡೆ ಅನುಭವಿಸಿದರೂ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಆಟವಾಡಿದ ಪಶ್ಚಿಮ ವಲಯ, ಯಶಸ್ವಿ ಜೈಸ್ವಾಲ್‌ ಹಾಗೂ ಸರ್ಫರಾಜ್‌ ಖಾನ್‌ ಅವರ ಬ್ಯಾಟಿಂಗ್ ನೆರವಿನಿಂದ ಬೃಹತ್‌ ಮೊತ್ತ ಕಲೆಹಾಕಿತು.

ADVERTISEMENT

323 ಎಸೆತಗಳನ್ನು ಆಡಿದ ಜೈಸ್ವಾಲ್‌ 30 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 265 ರನ್‌ ಚಚ್ಚಿದರು. ಸರ್ಫರಾಜ್‌ 127 ರನ್ ಗಳಿಸಿ ಮಿಂಚಿದರು. ಹೀಗಾಗಿ ಎದುರಾಳಿಗಳ ಗೆಲುವಿಗೆ 529 ರನ್‌ಗಳ ಕಠಿಣ ಸವಾಲು ಒಡ್ಡಲು ಸಾಧ್ಯವಾಯಿತು.

ಈ ಗುರಿ ಎದುರು ದಕ್ಷಿಣ ವಲಯದ ಆಟಗಾರರಿಂದ ಉತ್ತಮ ಆಟ ಮೂಡಿ ಬರಲಿಲ್ಲ. ಆರಂಭಿಕ ಬ್ಯಾಟರ್‌ ರೋಹನ್‌ ಕುನ್ನುಮಲ್‌ (93 ರನ್‌) ಹಾಗೂ ಕೊನೆಯಲ್ಲಿ ಟಿ.ಆರ್‌. ತೇಜಾ (53) ಕೊಂಚ ಪ್ರತಿರೋಧ ತೋರಿದರಾದರೂ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ.

ಅಂತಿಮವಾಗಿ ದಕ್ಷಿಣ ವಲಯ 234 ರನ್‌ಗಳಿಗೆ ಆಲೌಟ್‌ ಆಗುವುದರೊಂದಿಗೆ 294 ರನ್ ಅಂತರದ ಸೋಲಪ್ಪಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.