ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಚೊಚ್ಚಲ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಕ್ರಿಕೆಟ್ ಅಭಿಮಾನಿಗಳು, ರಾಜಕೀಯ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಂಡವನ್ನು ಅಭಿನಂದಿಸಿ, ‘ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ.
ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ’ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, 'ಇದು ಕೇವಲ ಗೆಲುವಲ್ಲ. ಇಡೀ ಆರ್‌ಸಿಬಿ ತಂಡಕ್ಕೆ ಭಾವನಾತ್ಮಕ ಕ್ಷಣ. ಈ ಸಲ ಕಪ್ ನಮ್ದೇ. ಐಪಿಎಲ್ ಫೈನಲ್‌ನಲ್ಲಿ ಈ ಅವಿಸ್ಮರಣೀಯ, ಐತಿಹಾಸಿಕ ಗೆಲುವಿಗಾಗಿ ಆರ್‌ಸಿಬಿಗೆ ಅಭಿನಂದನೆಗಳು’ ಎಂದು ಬರೆದುಕೊಂಡಿದ್ದಾರೆ.
ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ‘ಐಪಿಎಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರ್ ಸಿಬಿ ತಂಡಕ್ಕೆ ಹಾಗೂ ಅಭಿಮಾನಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಧೈರ್ಯ ಮತ್ತು ಉತ್ಸಾಹವನ್ನು ಪ್ರದರ್ಶಿಸುವ ಮೂಲಕ ಗಮನಾರ್ಹ ಗೆಲುವಿನ ನಗೆ ಬೀರಿದೆ. ಮುಂದಿನ ಪ್ರಯಾಣದಲ್ಲಿ ಆರ್‌ಸಿಬಿ ಯಶಸ್ಸು ಮುಂದುವರಿಯಲಿ ಎಂದು ಹಾರೈಸುತ್ತೇನೆ’ ಎಂದು ಅಭಿನಂದಿಸಿದ್ದಾರೆ.
ಕ್ರಿಕೆಟ್ ನೋಡಿ ಖುಷಿಪಟ್ಟ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ‘ಬೆಂಗಳೂರು, ಕರ್ನಾಟಕ ಮತ್ತು ದೇಶಾದ್ಯಂತದ ಕ್ರಿಕೆಟ್ ಪ್ರಿಯರಿಗೆ ಅದ್ಭುತ ಕ್ಷಣ. ಆರ್‌ಸಿಬಿ ವಿಜಯಶಾಲಿಯಾಗಿ ಹೊರಹೊಮ್ಮಿದೆ, ಇದು ಕರ್ನಾಟಕದ ಧೈರ್ಯ, ನಂಬಿಕೆ ಮತ್ತು ಚೈತನ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.