ADVERTISEMENT

ಏಕದಿನ ಕ್ರಿಕೆಟ್‌ನಲ್ಲಿ 498 ರನ್‌: ಇಂಗ್ಲೆಂಡ್‌ ವಿಶ್ವದಾಖಲೆ

ಏಜೆನ್ಸೀಸ್
Published 17 ಜೂನ್ 2022, 14:42 IST
Last Updated 17 ಜೂನ್ 2022, 14:42 IST
ಜೋಸ್‌ ಬಟ್ಲರ್‌ -ರಾಯಿಟರ್ಸ್ ಚಿತ್ರ
ಜೋಸ್‌ ಬಟ್ಲರ್‌ -ರಾಯಿಟರ್ಸ್ ಚಿತ್ರ   

ಆಮ್‌ಸ್ಟೆಲ್ವೀನ್, ನೆದರ್ಲೆಂಡ್ಸ್: ಇಂಗ್ಲೆಂಡ್‌ ತಂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಮೊತ್ತ ಪೇರಿಸಿ ವಿಶ್ವದಾಖಲೆ ಮಾಡಿದೆ.

ನೆದರ್ಲೆಂಡ್ಸ್‌ ವಿರುದ್ಧ ಆಮ್‌ಸ್ಟೆಲ್ವೀನ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಎಯೊನ್‌ ಮಾರ್ಗನ್‌ ನೇತೃತ್ವದ ತಂಡ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 498 ರನ್‌ ಕಲೆಹಾಕಿತು. ಈ ಮೂಲಕ ತನ್ನದೇ ಹೆಸರಿನಲ್ಲಿದ್ದ ವಿಶ್ವದಾಖಲೆ ಉತ್ತಮಪಡಿಸಿಕೊಂಡಿತು.

2018ರಲ್ಲಿ ಟ್ರೆಂಟ್‌ಬ್ರಿಜ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ 6 ವಿಕೆಟ್‌ಗೆ 481 ರನ್‌ ಪೇರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. 500 ರನ್‌ ಗಳಿಸುವ ಅವಕಾಶವನ್ನು ಇಂಗ್ಲೆಂಡ್‌ ಅಲ್ಪ ಅಂತರದಲ್ಲಿ ಕಳೆದುಕೊಂಡಿತು.

ADVERTISEMENT

ಜೋಸ್‌ ಬಟ್ಲರ್‌ (ಅಜೇಯ 162, 70 ಎ., 4X7, 6X14), ಫಿಲ್‌ ಸಾಲ್ಟ್‌ (122 ರನ್, 93 ಎ, 4X14, 6X3) ಮತ್ತು ಡೇವಿಡ್‌ ಮಲಾನ್ (125 ರನ್, 109 ಎ, 4X9, 6X3) ಅವರ ಅಬ್ಬರದ ಶತಕ ಹಾಗೂ ಲಿಯಾಮ್‌ ಲಿವಿಂಗ್‌ಸ್ಟೋನ್‌ (ಅಜೇಯ 66, 22 ಎ, 4X6, 6X6) ಬಿರುಸಿನ ಆಟ ಇಂಗ್ಲೆಂಡ್‌ ತಂಡದ ದಾಖಲೆಯ ಮೊತ್ತಕ್ಕೆ ಕಾರಣವಾಯಿತು.

ಬಟ್ಲರ್‌ ಅವರು 47 ಎಸೆತಗಳಲ್ಲಿ ಶತಕ ಸಿಡಿಸಿ, ಇಂಗ್ಲೆಂಡ್‌ ಪರ ಎರಡನೇ ಅತಿವೇಗದ ಶತಕ ಗಳಿಸಿದ ಸಾಧನೆ ಮಾಡಿದರು. ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಮೂರು ಅತ್ಯಧಿಕ ಮೊತ್ತಗಳು ಕೂಡಾ ಇಂಗ್ಲೆಂಡ್‌ ತಂಡದ ಹೆಸರಲ್ಲಿರುವುದು ವಿಶೇಷ.

ನೆದರ್ಲೆಂಡ್ಸ್‌ನ ಫಿಲಿಪ್‌ ಬೋಸೆವೆನ್‌ ಮತ್ತು ಶೇನ್‌ ಸ್ನೇಟರ್‌ ಅವರು ತಮ್ಮ 10 ಓವರ್‌ಗಳಲ್ಲಿ ಕ್ರಮವಾಗಿ 108 ಹಾಗೂ 99 ರನ್‌ಗಳನ್ನು ಬಿಟ್ಟುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.