ADVERTISEMENT

ಜನಾಂಗೀಯ ನಿಂದನೆ: ಪದಾರ್ಪಣೆ ಪಂದ್ಯದಲ್ಲೇ ಮಿಂಚಿದ್ದ ಒಲಿ ಕ್ರಿಕೆಟ್‌ನಿಂದ ಅಮಾನತು

ಮುಸ್ಲಿಮರು, ಮಹಿಳೆ ಮತ್ತು ಏಷ್ಯಾ ಖಂಡದ ಜನರ ಬಗ್ಗೆ ಅವಹೇಳನಕಾರಿ ಟ್ವೀಟ್

ಏಜೆನ್ಸೀಸ್
Published 8 ಜೂನ್ 2021, 2:10 IST
Last Updated 8 ಜೂನ್ 2021, 2:10 IST
ಒಲಿ ರಾಬಿನ್ಸನ್ –ಎಎಫ್‌ಪಿ ಚಿತ್ರ
ಒಲಿ ರಾಬಿನ್ಸನ್ –ಎಎಫ್‌ಪಿ ಚಿತ್ರ   

ಲಂಡನ್: ಪದಾರ್ಪಣೆ ಪಂದ್ಯದಲ್ಲೇ ಅಮೋಘ ಸಾಮರ್ಥ್ಯ ಮೆರೆದಿರುವ ಇಂಗ್ಲೆಂಡ್‌ನ ವೇಗದ ಬೌಲರ್ ಒಲಿ ರಾಬಿನ್ಸನ್ ಜನಾಂಗೀಯ ನಿಂದನೆ ಮತ್ತು ಲಿಂಗತಾರತಮ್ಯ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಅಮಾನತು ಮಾಡಿದೆ.

ಲಾರ್ಡ್ಸ್‌ನಲ್ಲಿ ಭಾನುವಾರ ಮುಗಿದ ನ್ಯೂಜಿಲೆಂಡ್ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ರಾಬಿನ್ಸನ್ ಉತ್ತಮ ಸಾಧನೆ ಮಾಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ಸೇರಿದಂತೆ ಒಟ್ಟು ಏಳು ವಿಕೆಟ್ ಉರುಳಿಸಿದ್ದ ಅವರು ಮೊದಲ ಇನಿಂಗ್ಸ್‌ನಲ್ಲಿ 42 ರನ್‌ ಕೂಡ ಗಳಿಸಿದ್ದರು. ಪಂದ್ಯ ಡ್ರಾದಲ್ಲಿ ಮುಕ್ತಾಯಗೊಂಡಿತ್ತು.

‘ಯುವಕರಾಗಿದ್ದಾಗ 2012 ಮತ್ತು 2013ರಲ್ಲಿ ಟ್ವೀಟ್ ಮಾಡಿದ ಹೇಳಿಕೆಗಳು ಪಂದ್ಯದ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದ್ದವು. ಹೀಗಾಗಿ ಅವರ ಮೇಲೆ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಮತ್ತು ಸಸೆಕ್ಸ್‌ ತಂಡದ ಆಟಗಾರ ಆಗಿರುವ 27 ವರ್ಷದ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಇಸಿಬಿ ತಿಳಿಸಿದೆ.

ADVERTISEMENT

‘ತಕ್ಷಣವೇ ತಂಡ ತೊರೆಯಲು ಅವರಿಗೆ ಸೂಚಿಸಲಾಗಿದ್ದು ಇದೇ 10ರಿಂದ ಎಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಅವರು ಲಭ್ಯ ಇರುವುದಿಲ್ಲ’ ಎಂದು ತಿಳಿಸಿದೆ.

ಮುಸ್ಲಿಮರನ್ನು ಭಯೋತ್ಪಾದಕ ಚಟುವಟಿಕೆಯೊಂದಿಗೆ ತಾಳೆ ಹಾಕಿದ್ದ ಅವರು ಮಹಿಳೆಯರು ಮತ್ತು ಏಷ್ಯಾದ ಜನರ ಬಗ್ಗೆ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದರು. ಟೆಸ್ಟ್ ಪಂದ್ಯದ ಮೊದಲ ದಿನವಾದ ಬುಧವಾರ ಎರಡೂ ತಂಡಗಳ ಆಟಗಾರರು ಒಗ್ಗಟ್ಟಿನ ಸಂದೇಶ ಸಾರಲು ಸಾಲಾಗಿ ನಿಂತಿದ್ದರು. ಇಂಗ್ಲೆಂಡ್ ಆಟಗಾರರು ‘ಕ್ರಿಕೆಟ್ ಎಲ್ಲರ ಕ್ರೀಡೆ’ ಎಂಬ ಬರಹ ಇರುವ ಟಿ ಶರ್ಟ್‌ ತೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ರಾಬಿನ್ಸನ್ ಅವರ ಟ್ವೀಟ್‌ಗಳ ಪ್ರಸ್ತಾಪವಾಗಿದೆ.

ತಮ್ಮ ವಿರುದ್ಧದ ಆರೋಪಗಳಿಗೆ ಉತ್ತರಿಸಿರುವ ರಾಬಿನ್ಸನ್ ‘ಇಂಥ ಹೇಳಿಕೆಗಳಿಂದ ಬೇಸರವಾಗಿದೆ. ನಾನು ಜನಾಂಗೀಯ ವಿರೋಧಿಯಾಗಲಿ ಮಹಿಳಾ ವಿರೋಧಿಯಾಗಲಿ ಅಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ‘ಇದು ನಂಬಲಸಾಧ್ಯ’ ಎಂದು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಪಂದ್ಯ ಮುಗಿದ ನಂತರ ಹೇಳಿದ್ದರು.

ಮೆಕ್ಸಿಕೊ: ಫುಟ್‌ಬಾಲ್ ಪಂದ್ಯಕ್ಕೆ ಅಡ್ಡಿ
ಡೆನ್ವೆರ್:
ತಾರತಮ್ಯವನ್ನು ಪ್ರಚೋದಿಸುವ ಘೋಷಣೆಗಳು ಕೇಳಿಬಂದ ಕಾರಣ ಮೆಕ್ಸಿಕೊ ರಾಷ್ಟ್ರೀಯ ತಂಡ ಪಾಲ್ಗೊಂಡಿದ್ದ ಫುಟ್‌ಬಾಲ್ ಪಂದ್ಯವನ್ನು ಮೂರು ನಿಮಿಷ ಕಾಲ ಸ್ಥಗಿತಗೊಳಿಸಿದ ಘಟನೆ ಭಾನುವಾರ ನಡೆದಿದೆ.

ಅಮೆರಿಕ ಮತ್ತು ಮೆಕ್ಸಿಕೊ ನಡುವಿನ ಕಾನ್ಕಾಕಾಫ್ ರಾಷ್ಟ್ರೀಯ ಲೀಗ್‌ನ ದ್ವಿತೀಯಾರ್ಧದಲ್ಲಿ ಈ ಘಟನೆ ನಡೆದಿದೆ. ಕಾನ್ಕಾಕಾಫ್ ಪ್ರಾದೇಶಿಕ ಆಡಳಿತ ಸಮಿತಿಯ ತಾರತಮ್ಯ ವಿರೋಧಿ ನೀತಿಯ ಭಾಗವಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿಸಲಾಗಿದೆ.

ಕಳೆದ ಗುರುವಾರ ನಡೆದ ಮೆಕ್ಸಿಕೊ ಮತ್ತು ಕೊಸ್ಟ ರಿಕಾ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯದಲ್ಲೂ ಇದೇ ರೀತಿ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.