5 ವಿಕೆಟ್ ಪಡೆದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಗಾಯಾಳು ರಿಷಭ್ ಪಂತ್ ರನ್‌ಗಾಗಿ ಓಡಿದ್ದು ಹೀಗೆ
ಚಿತ್ರಕೃಪೆ: ರಾಯಿಟರ್ಸ್, ಪಿಟಿಐ
ಮ್ಯಾಂಚೆಸ್ಟರ್: ಗಾಯಾಳು ರಿಷಭ್ ಪಂತ್ ಸಿಡಿಸಿದ ಅರ್ಧಶತಕದ ಬಲದಿಂದ ಭಾರತ ತಂಡವು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 358 ರನ್ ಗಳಿಸಿ ಆಲೌಟ್ ಆಗಿದೆ.
ಮೊದಲ ದಿನದಾಟದ ಅಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿದ್ದ ಶುಭಮನ್ ಗಿಲ್ ಪಡೆ, ಎರಡನೇ ದಿನ ಆ ಮೊತ್ತಕ್ಕೆ 94 ರನ್ ಗಳಿಸಿ ಗಂಟು ಮೂಟೆ ಕಟ್ಟಿದೆ.
ಬುಧವಾರ 48 ಎಸೆತಗಳಲ್ಲಿ 37 ರನ್ ಗಳಿಸಿದ್ದ ವೇಳೆ ಗಾಯಗೊಂಡು ಪೆವಿಲಿಯನ್ ಸೇರಿದ್ದ ಪಂತ್, ಇಂದು 6ನೇ ವಿಕೆಟ್ ಪತನದ ಬಳಿಕ ಕ್ರೀಸ್‌ಗೆ ಮರಳಿದರು. ನೋವಿನ ನಡುವೆಯೂ ವೇಗವಾಗಿ ರನ್ ಗಳಿಸಲು ಯತ್ನಿಸಿದ ಅವರು 54 ರನ್ ಗಳಿಸಿದ್ದಾಗ ವೇಗಿ ಜೋಫ್ರಾ ಆರ್ಚರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಅವರ ಆಟದ ನೆರವಿನಿಂದ ಭಾರತ 350ರ ಗಡಿ ದಾಟಲು ಸಾಧ್ಯವಾಯಿತು.
ಇಂಗ್ಲೆಂಡ್ ಪರ 72 ರನ್‌ಗೆ 5 ವಿಕೆಟ್ ಪಡೆದ ನಾಯಕ ಬೆನ್ ಸ್ಟೋಕ್ಸ್ ಯಶಸ್ವಿ ಬೌಲರ್ ಎನಿಸಿದರು. ಆರ್ಚರ್ 3 ವಿಕೆಟ್ ಕಿತ್ತರು. ಕ್ರಿಸ್ ವೋಕ್ಸ್ ಹಾಗೂ ಲಿಯಾಮ್ ಡಾಸನ್ ಒಂದೊಂದು ವಿಕೆಟ್ ಹಂಚಿಕೊಂಡರು.
ಪಂತ್ ದಾಖಲೆ
ಪಂತ್‌ಗೆ ಇದು ಈ ಟೂರ್ನಿಯಲ್ಲಿ 5ನೇ ಅರ್ಧಶತಕ. ಭಾರತದ ವಿಕೆಟ್ ಕೀಪರ್‌ವೊಬ್ಬರು ಒಂದೇ ಟೆಸ್ಟ್ ಸರಣಿಯಲ್ಲಿ ಐದು ಅರ್ಧಶತಕ ಗಳಿಸಿದ್ದು ಇದೇ ಮೊದಲು.
ಮಾಜಿ ಕ್ರಿಕೆಟಿಗ ಫಾರೂಕ್ ಎಂಜಿನಿಯರ್ (1972–73) ಇಂಗ್ಲೆಂಡ್ ವಿರುದ್ಧ, ಎಂ.ಎಸ್ ಧೋನಿ (2008–09 ಹಾಗೂ 2014) ಕ್ರಮವಾಗಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎದುರು ತಲಾ ನಾಲ್ಕು ಅರ್ಧಶತಕಗಳನ್ನು ಗಳಿಸಿದ್ದು ಈವರೆಗೆ ದಾಖಲೆಯಾಗಿತ್ತು. ಇದೀಗ ಪಂತ್, ಅವರಿಬ್ಬರನ್ನೂ ಹಿಂದಿಕ್ಕಿದರು.
ಇದಷ್ಟೇ ಅಲ್ಲ. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಅತಿಹೆಚ್ಚು ರನ್ ಗಳಿಸಿದ ವಿಕೆಟ್ ಕೀಪರ್ – ಬ್ಯಾಟರ್ ಎಂಬ ದಾಖಲೆಯೂ ಪಂತ್ ಅವರದ್ದಾಯಿತು. ಪ್ರಸ್ತುತ ಸರಣಿಯಲ್ಲಿ ಅವರು 479 ರನ್ ಗಳಿಸಿದ್ದಾರೆ. ಇದೇ ಟೂರ್ನಿಯಲ್ಲಿ ಆಡುತ್ತಿರುವ ಜೆಮೀ ಸ್ಮಿತ್ 415 ರನ್ ಗಳಿಸಿದ್ದು, ಪಂತ್ ಅವರನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ.
ಇಂಗ್ಲೆಂಡ್‌ನ ಅಲೆಕ್ ಸ್ಟೆವರ್ಟ್ ಅವರು 1998ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 464 ರನ್ ಗಳಿಸಿದ್ದು ಸಾಧನೆಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.