
ವಿಲ್ ಜಾಕ್ಸ್
ಪಲ್ಲೆಕೆಲೆ: ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳು ಮಂಗಳವಾರ ನಡೆಯುವ ಟಿ20 ವಿಶ್ವಕಪ್ ಸೂಪರ್ ಎಂಟರ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಕ್ರೀಡಾಂಗಣದ ಪಿಚ್ ನಿಧಾನಗತಿಯ ಬೌಲರ್‌ಗಳಿಗೆ ಒಲಿಯುವ ನಿರೀಕ್ಷೆಯಿದ್ದು, ಉಭಯ ತಂಡಗಳು ಸ್ಪಿನ್ ಸಂಪನ್ಮೂಲವನ್ನು ಅವಲಂಬಿಸಿಕೊಂಡಿವೆ.
ಇಂಗ್ಲೆಂಡ್ ತಂಡ ಟೂರ್ನಿಯಲ್ಲಿ ಇನ್ನೂ ತನ್ನ ಮೇರು ಹಂತದ ಆಟ ಕಂಡುಕೊಂಡಿಲ್ಲ. ಆದರೆ ಎರಡು ಬಾರಿಯ ಚಾಂಪಿಯನ್ ತಂಡವು ಗೆಲುವನ್ನು ಒಲಿಸಿಕೊಳ್ಳವ ದಾರಿ ಕಂಡುಕೊಂಡಿದೆ. ಸೂಪರ್ ಎಂಟರ ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡದ ಮೇಲೆ ಅಂಗ್ಲರ ಪಡೆ 51 ರನ್‌ಗಳ ಜಯಪಡೆದಿತ್ತು. ತಂಡದ ರನ್ ರೇಟ್ ಸಹ ಸುಧಾರಿಸಿದೆ.
ಇಲ್ಲಿನ ಪರಿಸ್ಥಿತಿಯನ್ನು ಪರಿಪೂರ್ಣವಾಗಿ ಬಳಸಿಕೊಂಡಿರುವ ಇಂಗ್ಲೆಂಡ್, ಶ್ರೀಲಂಕಾ ಎದುರು 146 ರನ್‌ಗಳ ಸಾಧಾರಣ ಮೊತ್ತವನ್ನು ರಕ್ಷಿಸಿಕೊಂಡಿತ್ತು. ವೇಗದ ಬೌಲರ್ ಜೋಫ್ರಾ ಆರ್ಚರ್ ಆರಂಭದಲ್ಲಿ ಯಶಸ್ಸು ದೊರಕಿಸಿಕೊಟ್ಟ ನಂತರ ಸ್ಪಿನ್ನರ್‌ಗಳು ಆತಿಥೇಯ ತಂಡದ ಕುಸಿತಕ್ಕೆ ಕಾರಣರಾದರು. ನಂಬಿಕಾರ್ಹ ಸ್ಪಿನ್ನರ್ ಅದಿಲ್ ರಶೀದ್ ಮತ್ತು ಎಡಗೈ ಸ್ಪಿನ್ನರ್ ಲಿಯಾಂ ಡಾಸನ್ ಪಿಚ್‌ನ ಪೂರ್ಣ ಲಾಭ ಪಡೆದರು. ಇವರ ಜೊತೆಗೆ ವಿಲ್ ಜ್ಯಾಕ್ಸ್ ಅವರ ಆಫ್ ಸ್ಪಿನ್ ದಾಳಿ ತಂಡದ ಗೆಲುವಿಗೆ ನೆರವಾಯಿತು. ಬ್ಯಾಟಿಂಗ್‌ನಲ್ಲೂ ಅವರ ಕಾಣಿಕೆ ಉಪಯುಕ್ತವಾಗಿದೆ.
ಆರಂಭ ಆಟಗಾರ ಫಿಲ್ ಸಾಲ್ಟ್ ಲಯಕ್ಕೆ ಮರಳಿದ್ದಾರೆ. ಈ ಟೂರ್ನಿಯಲ್ಲಿ ಮೊದಲ ಬಾರಿ ಅವರು ಲಂಕಾ ವಿರುದ್ಧ ಪವರ್‌ಪ್ಲೇ ನಂತರವೂ ಬ್ಯಾಟಿಂಗ್ ಮುಂದುವರಿಸಿದ್ದರು. ಆದರೆ ಅನುಭವಿ ಜೋಸ್ ಬಟ್ಲರ್ ವೈಫಲ್ಯ ಚಿಂತೆಗೆ ಕಾರಣವಾಗಿದೆ. ನಾಯಕ ಹ್ಯಾರಿ ಬ್ರೂಕ್ ಸಹ ತಿಣುಕಾಡುತ್ತಿದ್ದಾರೆ.
ಇಂಗ್ಲೆಂಡ್‌ಗೆ ಅನುಕೂಲಕರವಾದ ಅಂಶ ಈ ತಾಣಕ್ಕೆ ಒಗ್ಗಿಕೊಂಡಿರುವುದು. ಇದೇ ಕ್ರೀಡಾಂಗಣದಲ್ಲಿ ಈ ತಂಡ ಮೂರು ಪಂದ್ಯಗಳ ಟಿ20 ಸರಣಿಯನ್ನು ಸ್ವೀಪ್ ಮಾಡಿತ್ತು. ಎರಡು ದಿನಗಳ ಹಿಂದೆ ಲಂಕಾ ವಿರುದ್ಧವೂ ಸೂಪರ್ 8ರಲ್ಲಿ ಗೆದ್ದು ಶುಭಾರಂಭ ಮಾಡಿದೆ.
‘ನಾವು ಬ್ಯಾಟಿಂಗ್‌ನಲ್ಲಿ ಇನ್ನೂ ಪರಿಪೂರ್ಣ ಆಟವಾಡಿಲ್ಲ. ಉತ್ತಮ ಆರಂಭ ಹಾಗೂ ಬಯಸಿದ ಮೊತ್ತ ಗಳಿಸಲು ನಮಗೆ ಸಾಧ್ಯವಾಗುತ್ತಿಲ್ಲ’ ಎಂದು ಲಂಕಾ ವಿರುದ್ಧ ಗೆಲುವಿನ ನಂತರ ಬ್ರೂಕ್ ಹೇಳಿದ್ದರು.
ಇನ್ನೊಂದು ಕಡೆ ಪಾಕಿಸ್ತಾನ ತಂಡವು, ನ್ಯೂಜಿಲೆಂಡ್ ಎದುರಿನ ಮೊದಲ ಪಂದ್ಯವು ಮಳೆಗೆ ಕೊಚ್ಚಿಹೋದ ಕಾರಣ ಹತಾಶಗೊಂಡಿದೆ. ಪಂದ್ಯ ಸಾಗಿದಂತೆ ಇಲ್ಲಿನ ಪಿಚ್ ನಿಧಾನಗತಿ ಕಾಣುವುದರಿಂದ ಸಲ್ಮಾನ್ ಅಲಿ ಆಘಾ ಪಡೆ, ವೈವಿಧ್ಯಮಯ ಸ್ಪಿನ್ ದಾಳಿಯ ಮೇಲೆ ಭರವಸೆ ಇಟ್ಟುಕೊಂಡಿದೆ.
ಪಾಕ್ ತಂಡವು ‘ಪಾಝ್ (ತಡೆದು ಬೌಲ್ ಮಾಡುವ) ಸ್ಪಿನ್ನರ್’ ಉಸ್ಮಾನ್ ತಾರಿಖ್ ಜೊತೆ ಸೈಮ್ ಅಯೂಬ್, ಅಬ್ರಾರ್ ಅಹ್ಮದ್, ಶದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಅವರನ್ನು ಒಳಗೊಂಡ ಸ್ಪಿನ್ನರ್‌ಗಳ ಸೈನ್ಯ ಹೊಂದಿದೆ.
ಆದರೆ ಪಾಕಿಸ್ತಾನದ ಬ್ಯಾಟಿಂಗ್ ನಿರ್ವಹಣೆ ಕಳವಳಕ್ಕೆ ಕಾರಣವಾಗಿದೆ. ಅದರಲ್ಲೂ ಗುಣಮಟ್ಟದ ಸ್ಪಿನ್ ದಾಳಿಯೆದುರು ತಂಡ ಪರದಾಡಿದೆ. ಆರಂಭ ಆಟಗಾರ ಸಾಹಿಬ್‌ಝಾದ ಫರ್ಹಾನ್ ಮಾತ್ರ ಗಮನ ಸೆಳೆದಿದ್ದು ಒಂದು ಶತಕ ಸೇರಿದಂತೆ 4 ಇನಿಂಗ್ಸ್‌ಗಳಲ್ಲಿ 220 ರನ್ ಹೊಡೆದು ಟೂರ್ನಿಯ ಗರಿಷ್ಠ ಸ್ಕೋರರ್ ಎನಿಸಿದ್ದಾರೆ. ಸೈಮ್ ಅಯೂಬ್, ನಾಯಕ ಸಲ್ಮಾನ್ ಆಘಾ ಅವರು ಇನಿಂಗ್ಸ್‌ಗೆ ಲಂಗರುಹಾಕುವ ಜೊತೆ ವೇಗ ಹೆಚ್ಚಿಸಬಲ್ಲ ಆಟಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.