ADVERTISEMENT

ಆಸೀಸ್‌ ಕಗ್ಗಂಟು; ಭಾರತ ವಿರುದ್ಧ ಇಂಗ್ಲೆಂಡ್ ಗೆದ್ದರೂ WTC ಫೈನಲ್ ಪ್ರವೇಶ ಕಠಿಣ?

ಏಜೆನ್ಸೀಸ್
Published 3 ಮಾರ್ಚ್ 2021, 6:35 IST
Last Updated 3 ಮಾರ್ಚ್ 2021, 6:35 IST
ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್
ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್   

ಸಿಡ್ನಿ: ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ ಸೋಲಿಸಿದರೂ ಐಸಿಸಿ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಆಸ್ಟ್ರೇಲಿಯಾ ಅರ್ಹತೆ ಪಡೆಯುವುದು ಕಷ್ಟಕರವೆನಿಸಿದೆ.

ಭಾರತ ವಿರುದ್ಧ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ದಾಖಲಿಸಿದರೆ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಆಸ್ಟ್ರೇಲಿಯಾ ಅರ್ಹತೆ ಪಡೆಯಬೇಕಿತ್ತು. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ವಿರುದ್ಧ ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ)ದೂರು ದಾಖಲಿಸುವುದರೊಂದಿಗೆ ವಿವಾದವನ್ನು ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿಯು (ಐಸಿಸಿ) ಪರಿಶೀಲಿಸಲು ಮುಂದಾಗುತ್ತಿದ್ದು, ಆಸೀಸ್‌ಗೆ ಕಗ್ಗಂಟ್ಟು ಎದುರಾಗಿದೆ ಎಂದು ಸಿಡ್ನಿ ಮಾರ್ನಿಂಗ್ ಹೇರಾಲ್ಡ್ ವರದಿ ಮಾಡಿದೆ.

ವರ್ಷಾರಂಭದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮುಂದೂಡಿತ್ತು. ಪರಿಣಾಮ ಆಸ್ಟ್ರೇಲಿಯಾ ವಿರುದ್ಧ ಸಿಎಸ್‌ಎ ದೂರು ದಾಖಲಿಸಿದ್ದು, ನಷ್ಟ ಪರಿಹಾರ ಮತ್ತು ಡಬ್ಲ್ಯು‌ಟಿಸಿ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾಕ್ಕೆ ಅಂಕಗಳ ಕಡಿತವನ್ನು ಮನವಿ ಮಾಡಿದೆ.

ADVERTISEMENT

ಹಾಗೊಂದು ವೇಳೆ ಡಬ್ಲ್ಯು‌ಟಿಸಿಯಲ್ಲಿ ಆಸ್ಟ್ರೇಲಿಯಾ ಅಂಕಗಳ ಕಡಿತಕ್ಕೆ ಐಸಿಸಿ ನಿರ್ಧರಿಸಿದರೆ, ಭಾರತ ವಿರುದ್ಧ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೂ ಆಸ್ಟ್ರೇಲಿಯಾ ಫೈನಲ್ ಕನಸು ಭಗ್ನವಾಗಲಿದೆ.

ಸದ್ಭಾವನಾ ಮಾತುಕತೆಯ ಮೂಲಕ ವಿಷಯವನ್ನು ಬಗೆಹರಿಸಲು ಸಾಧ್ಯವೇ ಎಂಬುದಕ್ಕೆ ಉತ್ತರಿಸಲು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಈ ವಾರದ ಅಂತ್ಯದ ವರೆಗೆ ಸಮಯ ನೀಡಲಾಗಿದೆ.

ಅದು ಸಾಧ್ಯವಾಗದಿದ್ದರೆ, ಸಮಸ್ಯೆಯು ಐಸಿಸಿಯ ವಿವಾದ ಸಮಿತಿಗೆ ವರ್ಗಾಯಿಸಲಾಗುವುದು ಮತ್ತು ಅದನ್ನು ಸ್ವತಂತ್ರ ಸಮಿತಿಗೆ ನೀಡಲಾಗುವುದು. ಅದು ಕ್ರಿಕೆಟ್ ಆಸ್ಟ್ರೇಲಿಯಾವು ತನ್ನ ಹಕ್ಕಿನ ಪರಿಧಿಯಲ್ಲಿ ದಕ್ಷಿಣ ಆಫ್ರಿಕಾ ಸರಣಿಯನ್ನು ಮುಂದೂಡಲಾಗಿದೆಯೇ ಎಂಬುದನ್ನು ಪರಿಶೀಲಿಸಲಿದೆ.

ಸ್ವತಂತ್ರ ಸಮಿತಿಯು ಮುಂದೂಡಲ್ಪಟ್ಟ ಮೂರು ಟೆಸ್ಟ್‌ಗಳಿಗೆ ದಕ್ಷಿಣ ಆಫ್ರಿಕಾಗೆ ಪೂರ್ಣ 120 ಅಂಕಗಳನ್ನು ನೀಡಲು ನಿರ್ಧರಿಸಬಹುದು. ಹಾಗಾದ್ದಲ್ಲಿ, ವಿರಾಟ್ ಕೊಹ್ಲಿ ಬಳಗವನ್ನು ಇಂಗ್ಲೆಂಡ್ ಅಂತಿಮ ಟೆಸ್ಟ್‌ನಲ್ಲಿ ಮಣಿಸಿದರೂ ಡಬ್ಯುಟಿಸಿ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ ಭಾರತಕ್ಕಿಂತ ಕೆಳಗಿನ ಸ್ಥಾನದಲ್ಲೇ ಉಳಿದುಕೊಳ್ಳಲಿದೆ.

ಇನ್ನೊಂದೆಡೆ ಪ್ರಸ್ತುತ ಫ್ಯೂಚರ್ ಟೂರ್ ಪ್ರೋಗ್ರಾಂ (ಎಫ್‌ಟಿಪಿ) ಮುಗಿಯುವುದರೊಳಗೆ (2023 ಏಪ್ರಿಲ್), ಸಿಎಸ್‌ಎ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಸರಣಿ ಆಯೋಜನೆಗೆ ಪರ್ಯಾಯ ದಿನಾಂಕವನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡುವ ಕುರಿತಂತೆ ಸಮಿತಿಯು ನಿರ್ಧರಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.