
ಬಿಸಿಸಿಐ ಕಾರ್ಯದರ್ಶಿ ಜಯ್ ಶಾ
ಪಿಟಿಐ
ನವದೆಹಲಿ: ಟಿ–20 ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಅಲ್ಲದೆ, ಅವರ ನಾಯಕತ್ವದಲ್ಲಿ ತಂಡ ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅನ್ನು ಜಯಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
37 ವರ್ಷದ ರೋಹಿತ್ ಶರ್ಮಾ, ಕ್ರಿಕೆಟ್ ದಂತಕಥೆಗಳಾದ ಕಪಿಲ್ ದೇವ್ ಮತ್ತು ಮಹೇಂದ್ರ ಸಿಂಗ್ ಧೋನಿ ಬಳಿಕ ವಿಶ್ವಕಪ್ ಗೆದ್ದ ಭಾರತದ ಮೂರನೇ ನಾಯಕರಾಗಿದ್ದಾರೆ. ಟಿ–20 ವಿಶ್ವಕಪ್ ಗೆಲ್ಲುತ್ತಿದ್ದಂತೆ ಟಿ–20 ಕ್ರಿಕೆಟ್‌ಗೆ ಅವರು ವಿದಾಯ ಘೋಷಿಸಿದ್ದಾರೆ.
‘ಮುಂದಿನ ವೇದಿಕೆ ಡಬ್ಕ್ಯುಟಿಸಿ ಫೈನಲ್ ಮತ್ತು ಚಾಂಪಿಯನ್ಸ್ ಟ್ರೋಫಿ. ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಈ ಎರಡೂ ಟೂರ್ನಿಗಳಲ್ಲಿ ನಾವು ಚಾಂಪಿಯನ್ ಆಗುತ್ತೇವೆ’ ಎಂದು ಶಾ ಹೇಳಿದ್ದಾರೆ.
8 ವರ್ಷಗಳ(2017ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿತ್ತು) ಬಳಿಕ ಮುಂದಿನ ವರ್ಷ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದ್ದು, ಕರಡು ವೇಳಾಪಟ್ಟಿ ಸಹ ಐಸಿಸಿಗೆ ಸಲ್ಲಿಸಲಾಗಿದೆ. ಇದಕ್ಕೆ ಬಿಸಿಸಿಐ ಇನ್ನೂ ಹಸಿರು ನಿಶಾನೆ ತೋರಿಲ್ಲ.
ಈ ಮೂಲಕ 2023ರ ಏಷ್ಯಾ ಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅನುಸರಿಸಿದ್ದ ಹೈಬ್ರಿಡ್ ಮಾದರಿಗೆ ಬಿಸಿಸಿಐ ಒತ್ತಾಯಿಸುವುದು ಸ್ಪಷ್ಟ. ಈ ಸರಣಿಯ ಆತಿಥ್ಯವನ್ನು ಪಾಕಿಸ್ತಾನ ವಹಿಸಿದ್ದರೂ ಪಾಕಿಸ್ತಾನ ವಿರುದ್ಧದ ಒಂದು ಪಂದ್ಯ ಸೇರಿ ಎಲ್ಲವನ್ನೂ ಶ್ರೀಲಂಕಾದಲ್ಲೇ ಭಾರತ ಆಡಿತ್ತು.
ಇತರೆ ಮಾದರಿಯ ಕ್ರಿಕೆಟ್‌ನ ನಾಯಕತ್ವಕ್ಕೆ ರೋಹಿತ್ ಶರ್ಮಾ ವಿದಾಯ ಹೇಳಬಹುದೇ? ಎಂಬ ಊಹಾಪೋಹಗಳಿಗೆ ಶಾ ಉತ್ತರ ನೀಡಿದ್ದಾರೆ.
ಟಿ–20 ವಿಶ್ವಕಪ್ ಗೆಲುವನ್ನು ಶಾ ಟಿ–20 ಕ್ರಿಕೆಟ್‌ಗೆ ವಿದಾಯ ಹೇಳಿರುವ ಮೂವರು ಹಿರಿಯ ಕ್ರಿಕೆಟಿಗರು ಮತ್ತು ನಿರ್ಗಮಿತ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಅರ್ಪಿಸಿದ್ದಾರೆ.
‘ಈ ಜಯವನ್ನು ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ರವೀಂದ್ರ ಜಡೇಜ ಅವರಿಗೆ ಸಮರ್ಪಿಸಿಉತ್ತೇನೆ’ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.