ADVERTISEMENT

ವೇಗವಾಗಿ 5 ಸಾವಿರ ರನ್: ನಾಯಕನಾಗಿ ಮತ್ತೊಂದು ದಾಖಲೆ ಬರೆದ ವಿರಾಟ್ ಕೊಹ್ಲಿ

9 ಸಾವಿರ ರನ್ ಸಾಧನೆ ಮಾಡಿದ ಉಪನಾಯಕ ರೋಹಿತ್‌ ಶರ್ಮಾ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 10:13 IST
Last Updated 20 ಜನವರಿ 2020, 10:13 IST
   

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದನಾಯಕ ವಿರಾಟ್‌ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನಸರಣಿಯ ಅಂತಿಮ ಪಂದ್ಯದ ವೇಳೆ ಮತ್ತೊಂದು ದಾಖಲೆ ಬರೆದರು. ಅವರು ಏಕದಿನ ಕ್ರಿಕೆಟ್‌ನಲ್ಲಿ ನಾಯಕನಾಗಿ ವೇಗವಾಗಿ (82 ಇನಿಂಗ್ಸ್‌ಗಳಲ್ಲಿ) 5 ಸಾವಿರ ರನ್‌ ಗಳಿಸಿದ ನಾಯಕ ಎನಿಸಿದರು.

ಈ ದಾಖಲೆ ಇದುವರೆಗೆ ಮಹೇಂದ್ರ ಸಿಂಗ್ ಧೋನಿ ಹೆಸರಲ್ಲಿತ್ತು. ಅವರು 127 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ (131), ಗ್ರೇಮ್‌ ಸ್ಮಿತ್‌(135)ಹಾಗೂ ಸೌರವ್‌ ಗಂಗೂಲಿ(136) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.

ಕೊಹ್ಲಿ, ಇದೇ ತಿಂಗಳು (ಶ್ರೀಲಂಕಾ ವಿರುದ್ಧದ ಟಿ20 ಸರಣಿ ವೇಳೆ) ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಕಡಿಮೆ ಇನಿಂಗ್ಸ್‌ಗಳಲ್ಲಿ11 ಸಾವಿರ ರನ್‌ ಗಳಿಸಿದ ದಾಖಲೆ ಮಾಡಿದ್ದರು. ಇದಕ್ಕಾಗಿ ಅವರಿಗೆ 169 ಪಂದ್ಯಗಳ 196 ಇನಿಂಗ್ಸ್‌ಗಳು ಬೇಕಾಗಿದ್ದವು. 226 ಪಂದ್ಯಗಳ 252 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವ ರಿಕಿ ಪಾಂಟಿಂಗ್‌ ಎರಡನೇ ಸ್ಥಾನದಲ್ಲಿದ್ದಾರೆ.

ADVERTISEMENT

ಸದ್ಯ ವೇಗವಾಗಿ 4, 5, 6, 7, 8, 9, 10 ಸಾವಿರ ರನ್‌ ಗಳಿಸಿದ ನಾಯಕ ಎಂಬ ಶ್ರೇಯವೂ ಕೊಹ್ಲಿ ಹೆಸರಲ್ಲಿದೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವುಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಸ್ಟೀವ್‌ ಸ್ಮಿತ್ ಶತಕ (131) ಹಾಗೂ ಮಾರ್ನಸ್‌ ಲಾಬುಶೇನ್‌ ಅರ್ಧಶತಕದ(54) ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 286 ರನ್‌ ಗಳಿಸಿತ್ತು. ಈ ಗುರಿಯನ್ನು ಭಾರತ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ಮುಟ್ಟಿ ಗೆಲುವಿನ ಸಂಭ್ರಮ ಆಚರಿಸಿತು.

ಶತಕ ಗಳಿಸಿದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿಭಾರತದ 7 ವಿಕೆಟ್ ಗೆಲುವಿಗೆ ನೆರವಾಗಿದ್ದರು. ಕೊಹ್ಲಿ 91 ಎಸೆತಗಳಲ್ಲಿ 8 ಬೌಂಡರಿ ಸಹಿತ 89 ರನ್ ಗಳಿಸಿದರೆ, ರೋಹಿತ್‌ 128 ಎಸೆತಗಳಲ್ಲಿ 8 ಬೌಂಡರಿ 6 ಭರ್ಜರಿ ಸಿಕ್ಸರ್‌ ಸಹಿತ 119 ರನ್‌ ಗಳಿಸಿದರು. ಅದಕ್ಕೂ ಮೊದಲು ಮೊಹಮದ್‌ ಶಮಿ ನಾಲ್ಕು ವಿಕೆಟ್‌ ಪಡೆದು ಮಿಂಚಿದ್ದರು.

ಇದೇ ಪಂದ್ಯದಲ್ಲಿ ರೋಹಿತ್‌ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 9 ಸಾವಿರ ರನ್‌ ಕಲಹಾಕಿದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿದರು. ಇದಕ್ಕಾಗಿ ಅವರು 217 ಇನಿಂಗ್ಸ್‌ ಆಡಿದ್ದಾರೆ. 194 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿರುವ ಕೊಹ್ಲಿ ಹಾಗೂ 205ನೇ ಇನಿಂಗ್ಸ್‌ನಲ್ಲಿ ಇಷ್ಟು ರನ್‌ ಗಳಿಸಿರುವ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್‌ ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.