ADVERTISEMENT

ಭಾರತಕ್ಕೆ ಶ್ರೀಲಂಕಾ ಸವಾಲು: ಮಹಿಳಾ ಏಷ್ಯಾ ಕಪ್ ಟೂರ್ನಿ

ಟಿ20: ಮಹಿಳಾ ಏಷ್ಯಾ ಕಪ್ ಟೂರ್ನಿ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 12:50 IST
Last Updated 30 ಸೆಪ್ಟೆಂಬರ್ 2022, 12:50 IST
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌
ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌   

ಸಿಲ್ಹೆಟ್, ಬಾಂಗ್ಲಾದೇಶ: ಇಂಗ್ಲೆಂಡ್‌ ನೆಲದಲ್ಲಿ ಐತಿಹಾಸಿಕ ಸರಣಿ ಗೆಲುವು ಸಾಧಿಸಿದ ಹುಮ್ಮಸ್ಸಿನಲ್ಲಿರುವ ಭಾರತ ಮಹಿಳಾ ತಂಡದವರು ಏಷ್ಯಾ ಕಪ್‌ ಟಿ20 ಟೂರ್ನಿಯಲ್ಲಿ ಪ್ರಶಸ್ತಿಯೆಡೆಗಿನ ಅಭಿಯಾನವನ್ನು ಶನಿವಾರ ಆರಂಭಿಸಲಿದ್ದಾರೆ.

ಸಿಲ್ಹೆಟ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ, ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಮಹಿಳೆಯರ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿ ಮೊದಲ ಬಾರಿ 2004 ರಲ್ಲಿ ನಡೆದಿತ್ತು. 2018ರ ಆವೃತ್ತಿ ಹೊರತುಪಡಿಸಿ, ಇತರ ಎಲ್ಲ ಟೂರ್ನಿಗಳಲ್ಲೂ (ಆರು ಸಲ) ಭಾರತ ಚಾಂಪಿಯನ್‌ ಆಗಿದೆ. ಏಕದಿನ ಮಾದರಿಯಲ್ಲಿ ನಡೆದ ನಾಲ್ಕು ಟೂರ್ನಿಗಳು ಮತ್ತು ಟಿ20 ಮಾದರಿಯಲ್ಲಿ ನಡೆದ ಎರಡು ಟೂರ್ನಿಗಳನ್ನು ಜಯಿಸಿದೆ.

ADVERTISEMENT

2018ರ ಟೂರ್ನಿಯ ಫೈನಲ್‌ನಲ್ಲಿ ಭಾರತ ತಂಡ, ಆತಿಥೇಯ ಬಾಂಗ್ಲಾ ಎದುರು ಸೋಲು ಅನುಭವಿಸಿತ್ತು. ಮಹಿಳಾ ಏಷ್ಯಾಕಪ್‌ ಟೂರ್ನಿ 2012 ರಿಂದಲೂ ಟಿ20 ಮಾದರಿಯಲ್ಲಿ ಆಯೋಜನೆಯಾಗುತ್ತಿದೆ.

ನಾಲ್ಕು ವರ್ಷಗಳ ಬಿಡುವಿನ ಬಳಿಕ ಈ ಟೂರ್ನಿ ನಡೆಯುತ್ತಿದೆ. 2020 ರಲ್ಲಿ ಬಾಂಗ್ಲಾದಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ಕೋವಿಡ್ ಕಾರಣ 2021ಕ್ಕೆ ಮುಂದೂಡಲಾಗಿತ್ತು. ಆ ಬಳಿಕ ಟೂರ್ನಿಯನ್ನೇ ರದ್ದುಗೊಳಿಸಲಾಗಿತ್ತು.

ಏಕದಿನ ಪಂದ್ಯಗಳಲ್ಲಿ ಉತ್ತಮ ಫಾರ್ಮ್‌ನಲ್ಲಿರುವ ಭಾರತ ತಂಡ, ಇತ್ತೀಚಿನ ದಿನಗಳಲ್ಲಿ ಟಿ20 ಮಾದರಿಯಲ್ಲಿ ಅಷ್ಟೊಂದು ಯಶಸ್ಸು ಗಳಿಸಿಲ್ಲ. ಆದರೂ ಏಷ್ಯಾದ ಇತರ ತಂಡಗಳಿಗೆ ಹೋಲಿಸಿದರೆ ಭಾರತವೇ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದೆ.

ನಾಯಕಿ ಹರ್ಮನ್‌ಪ್ರೀತ್‌ ಕೌರ್‌, ಸ್ಮೃತಿ ಮಂದಾನ, ಶಫಾಲಿ ವರ್ಮಾ ಮತ್ತು ಎಸ್‌.ಮೇಘನಾ ಅವರು ಬ್ಯಾಟಿಂಗ್‌ ವಿಭಾಗಕ್ಕೆ ಬಲ ನೀಡಲಿದ್ದಾರೆ. ಗಾಯದ ಕಾರಣ ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳದೇ ಇದ್ದ ಜೆಮಿಮಾ ರಾಡ್ರಿಗಸ್‌ ತಂಡಕ್ಕೆ ವಾಪಸಾಗಿದ್ದಾರೆ.

ರೇಣುಕಾ ಸಿಂಗ್‌, ರಾಧಾ ಯಾದವ್‌, ರಾಜೇಶ್ವರಿ ಗಾಯಕ್ವಾಡ್‌ ಮತ್ತು ದೀಪ್ತಿ ಶರ್ಮಾ ಅವರನ್ನೊಳಗೊಂಡ ಬೌಲಿಂಗ್‌ ವಿಭಾಗವೂ ಬಲಿಷ್ಠವಾಗಿದೆ.

ಚಾಮರಿ ಅಟಪಟ್ಟು ನೇತೃತ್ವದ ಶ್ರೀಲಂಕಾ ತಂಡ ಯುವ ಹಾಗೂ ಅನುಭವಿ ಆಟಗಾರ್ತಿಯರನ್ನು ಒಳಗೊಂಡಿದ್ದು, ಭಾರತಕ್ಕೆ ಪೈಪೋಟಿ ನೀಡಲು ಸಜ್ಜಾಗಿದೆ.

ಈ ಬಾರಿ ಭಾರತ, ಪಾಕಿಸ್ತಾನ, ಥಾಯ್ಲೆಂಡ್‌, ಶ್ರೀಲಂಕಾ, ಮಲೇಷ್ಯಾ, ಯುಎಇ ಮತ್ತು ಬಾಂಗ್ಲಾದೇಶ ಒಳಗೊಂಡಂತೆ ಏಳು ತಂಡಗಳು ಪಾಲ್ಗೊಂಡಿವೆ. ಎಲ್ಲ ತಂಡಗಳು ಲೀಗ್‌ ಹಂತದಲ್ಲಿ ಆರು ಪಂದ್ಯಗಳನ್ನು ಆಡಲಿವೆ. ಅಗ್ರ ನಾಲ್ಕು ಸ್ಥಾನಗಳನ್ನು ಪಡೆಯುವ ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ.

ಪಂದ್ಯಗಳು

ಬಾಂಗ್ಲಾದೇಶ– ಥಾಯ್ಲೆಂಡ್‌ (ಬೆಳಿಗ್ಗೆ 8.30)

ಭಾರತ– ಶ್ರೀಲಂಕಾ (ಮಧ್ಯಾಹ್ನ 1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.