ADVERTISEMENT

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪೊಲಾರ್ಡ್ ವಿದಾಯ: ಸಚಿನ್, ಗೇಲ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2022, 11:02 IST
Last Updated 21 ಏಪ್ರಿಲ್ 2022, 11:02 IST
ಕೀರನ್ ಪೊಲಾರ್ಡ್ -ಪಿಟಿಐ ಚಿತ್ರ
ಕೀರನ್ ಪೊಲಾರ್ಡ್ -ಪಿಟಿಐ ಚಿತ್ರ   

ಮುಂಬೈ: ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ತಂಡದ ನಾಯಕ ಕೀರನ್ ಪೊಲಾರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್‌ ನಿವೃತ್ತಿ ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್, ವೆಸ್ಟ್‌ ಇಂಡೀಸ್‌ನ ಸ್ಫೋಟಕ ಆಟಗಾರ ಕ್ರೀಸ್‌ ಗೇಲ್‌ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಕೀರನ್ ಪೊಲಾರ್ಡ್ ಅವರೊಂದಿಗೆ ಒಡನಾಟವನ್ನು ಮೆಲುಕು ಹಾಕಿದ್ದಾರೆ.

‘ಮೈದಾನದಲ್ಲಿ ಸೊಗಸಾದ ವರ್ತನೆ ಹೊಂದಿರುವ ಹೋರಾಟಗಾರ ಮತ್ತು ಚಾಲೆಂಜರ್! ಅಭಿನಂದನೆಗಳು ಪೊಲಾರ್ಡ್’ ಎಂದು ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ADVERTISEMENT

‘ನನಗಿಂತ ಮೊದಲು ನೀವು ನಿವೃತ್ತಿ ಹೊಂದಿದ್ದೀರಿ ಎಂದು ನಂಬಲಾಗುತ್ತಿಲ್ಲ. ನಿಮ್ಮ ಅಂತರಾರಾಷ್ಟ್ರೀಯ ವೃತ್ತಿಜೀವನಕ್ಕೆ ಅಭಿನಂದನೆಗಳು. ನಿಮ್ಮ ಜೊತೆಯಲ್ಲಿ ಆಡಿದ್ದು ತುಂಬಾ ಅದ್ಭುತವಾಗಿತ್ತು. ನಿವೃತ್ತಿಯ ಶುಭಾಶಯಗಳು’ ಎಂದು ಕ್ರೀಸ್ ಗೇಲ್ ಟ್ವೀಟ್ ಮಾಡಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡದ ಸಹ ಆಟಗಾರರಾದ ಜಸ್‌ಪ್ರೀತ್‌ ಬೂಮ್ರಾ, ಸೂರ್ಯಕುಮಾರ್ ಯಾದವ್ ಸೇರಿದಂತೆ ಹಾರ್ದಿಕ್ ಪಾಂಡ್ಯ, ಕೃಣಾಲ್‌ ಪಾಂಡ್ಯ ಅವರು ಪೊಲಾರ್ಡ್‌ಗೆ ಶುಭ ಹಾರೈಸಿದ್ದಾರೆ.

34 ವರ್ಷದ ಪೊಲಾರ್ಡ್‌ 2007ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 123 ಏಕದಿನ ಪಂದ್ಯಗಳನ್ನು ಆಡಿರುವ ಅವರು 2,706 ರನ್ ಗಳಿಸಿದ್ದಾರೆ. ಟಿ–20 ಮಾದರಿಯಲ್ಲಿ 101 ಪಂದ್ಯಗಳನ್ನು ಆಡಿದ್ದು, 1,569 ರನ್ ಸಿಡಿಸಿದ್ದಾರೆ. ಏಕದಿನ ಮಾದರಿಯಲ್ಲಿ 55, ಟಿ–20 ಮಾದರಿಯಲ್ಲಿ 44 ವಿಕೆಟ್‌ಗಳನ್ನು ಪಡೆದಿದ್ದಾರೆ.

ಸದ್ಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಅವರು ಆಡುತ್ತಿದ್ದಾರೆ. ಟಿ–20 ಫ್ರ್ಯಾಂಚೈಸ್ ಮತ್ತು ಟಿ–10 ಲೀಗ್‌ ಟೂರ್ನಿಗಳಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

‘ಹತ್ತು ವರ್ಷದ ಬಾಲಕನಿದ್ದಾಗಿನಿಂದಲೂ ವೆಸ್ಟ್ ಇಂಡೀಸ್ ತಂಡದಲ್ಲಿ ಆಡುವ ಕನಸಿತ್ತು. ಸುಮಾರು 15 ವರ್ಷ ತಂಡದಲ್ಲಿ ಆಡುವ ಅವಕಾಶ ಪಡೆದೆ. ವಿಂಡೀಸ್ ಬಳಗದ ನಾಯಕತ್ವ ವಹಿಸಿದೆ. ಇದೀಗ ನಿರ್ಣಯದ ಸಮಯ ಬಂದಿದೆ. ನಿವೃತ್ತಿಯಾಗುವ ನಿರ್ಧಾರ ಮಾಡಿದ್ದೇನೆ’ ಎಂದು ಪೊಲಾರ್ಡ್ ಇನ್‌ಸ್ಟಾಗ್ರಾಮ್‌ನಲ್ಲಿ ಬುಧವಾರ ಬರೆದುಕೊಂಡಿದ್ದರು.

ವಿಶ್ವ ಕ್ರಿಕೆಟ್‌ನಲ್ಲಿ ದೊಡ್ಡ ಹೊಡೆತವಾಡುವ ಬ್ಯಾಟರ್‌ಗಳಲ್ಲಿ ಕೀರನ್ ಪೊಲಾರ್ಡ್ ಕೂಡ ಒಬ್ಬರು. ಫುಲ್ಲರ್ ಎಸೆತಗಳು ಮತ್ತು ಯಾರ್ಕರ್‌ಗಳಲ್ಲಿ ಸಿಕ್ಸರ್‌ ಎತ್ತುವ ಅವರ ಕೌಶಲ ಅಮೋಘವಾದದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.