ADVERTISEMENT

ಜಗತ್ತು ಕೋವಿಡ್‌–19 ಮುಕ್ತವಾದ ನಂತರವೇ ಕ್ರಿಕೆಟ್ ಆರಂಭವಾಗಲಿ: ಯುವರಾಜ್ ಸಿಂಗ್

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2020, 11:24 IST
Last Updated 25 ಏಪ್ರಿಲ್ 2020, 11:24 IST
   

ನವದೆಹಲಿ: ‘ನಾವು ಮೊದಲು ನಮ್ಮ ದೇಶ ಮತ್ತು ಜಗತ್ತನ್ನು ಕೊರೊನಾವೈರಸ್‌ನಿಂದ ರಕ್ಷಿಸಿಕೊಳ್ಳಬೇಕಿದೆ.ಜಗತ್ತು ಕೋವಿಡ್‌–19 ಸೋಂಕು ಮುಕ್ತವಾದ ನಂತರವೇ ಕ್ರಿಕೆಟ್‌ ಚಟುವಟಿಕೆಗಳು ಆರಂಭವಾಗಲಿ’ ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ಆಲ್ರೌಂಡರ್‌ ಯುವರಾಜ್‌ ಸಿಂಗ್‌ ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಇದನ್ನು (ಕೋವಿಡ್–19)ಸಂಪೂರ್ಣ ನಿರ್ಮೂಲನೆ ಮಾಡಬೇಕಿದೆ ಅಥವಾ ಸೋಂಕಿನ ಪ್ರಮಾಣ ಶೇ. 90–95 ರಷ್ಷು ಇಳಿಯಬೇಕಿದೆ. ಏಕೆಂದರೆ ಸೋಂಕು ಹೆಚ್ಚಾದರೆ, ಆಟಗಾರರು ಮೈದಾನಕ್ಕಿಳಿಯಲು, ಡ್ರೆಸ್ಸಿಂಗ್‌ ಕೊಠಡಿಗೆ ತೆರಳಲು ಹೆದರುತ್ತಾರೆ’

‘ಆಟಗಾರರು ದೇಶಕ್ಕಾಗಿ, ಕ್ಲಬ್‌ಗಾಗಿ ಆಡುವಾಗ ಸಾಕಷ್ಟು ಒತ್ತಡದಲ್ಲಿರುತ್ತಾರೆ. ಅಂತಹ ಸಂದರ್ಭದಲ್ಲಿ ಕೊರೊನಾವೈರಸ್‌ ಬಗೆಗಿನ ಆತಂಕವನ್ನು ಯಾವ ಆಟಗಾರನೂ ಬಯಸುವುದಿಲ್ಲ’ ಎಂದು 2011ರ ಏಕದಿನ ವಿಶ್ವಕಪ್‌ ಟೂರ್ನಿಯ ಸರಣಿ ಶ್ರೇಷ್ಠ ಯುವಿ ಹೇಳಿದ್ದಾರೆ.

ADVERTISEMENT

‘ನೀವು ಕೈಗವಸು ಹಾಕಿದ್ದಾಗ ಸಾಕಷ್ಟು ಬೆವರುತ್ತೀರಿ. ಬ್ಯಾಟಿಂಗ್ ಮಾಡುತ್ತಿದ್ದಾಗ ಬಾಳೆಹಣ್ಣು ತಿನ್ನಲು ಬಯಸುವಿರಿ ಎಂದಿಟ್ಟುಕೊಳ್ಳಿ. ಆದರೆ, ಬೇರೆ ಇನ್ಯಾರೋ ಬಾಳೆ ಹಣ್ಣು ಹಿಡಿದಿರುತ್ತಾರೆ. ಅಂತಹ ಸಂದರ್ಭದಲ್ಲಿ ನೀವು ಬಾಳೆ ಹಣ್ಣು ತಿನ್ನುವ ನಿರ್ಧಾರದಿಂದಲೇ ಹಿಂದೆ ಸರಿಯಬೇಕಾಗುತ್ತದೆ’ ಎಂದು ಉದಾಹರಿಸಿದ್ದಾರೆ.

‘ಆಡುವಾಗತಲೆಯಲ್ಲಿ ಇಂತಹ ಗೊಂದಲಗಳು ಮೂಡುವುದನ್ನು ನೀವು ಬಯಸಲಾರಿರಿ. ನೀವು ಚೆಂಡಿನ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಇದು ನನ್ನ ಅಭಿಪ್ರಾಯ. ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಲು ಜಗತ್ತು ಮುಕ್ತವಾಗಿದೆ’ ಎಂದು ಹೇಳಿದ್ದಾರೆ.

ಜಗತ್ತಿನಾಂದ್ಯಂತ ಸೋಂಕು ಪ್ರಕರಣಗಳ ಪ್ರಮಾಣ ಹೆಚ್ಚಳವಾದ ಕಾರಣ ಇತರ ಕ್ರೀಡೆಗಳಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ. ಸದ್ಯಕ್ರೀಡಾಂಗಣಗಳಿಗೆ ಪ್ರೇಕ್ಷಕರಿಗೆಪ್ರವೇಶ ನಿರ್ಬಂಧಿಸಿ ಆಟ ಆರಂಭಿಸಲು ರಾಷ್ಟ್ರೀಯ ಮಂಡಳಿಗಳು ಆಲೋಚಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.