ಕ್ರಿಕೆಟ್ ವಿಶ್ಲೇಷಕಿ ಇಶಾ ಗುಹಾ ಮತ್ತು ಜಸ್‌ಪ್ರೀತ್ ಬೂಮ್ರಾ
Credit: Credit: X/@isaguha, PTI File Photo
ಬ್ರಿಸ್ಬೇನ್: ಇಲ್ಲಿನ ಗಾಬಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದ ವೇಳೆ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರನ್ನು ‘ಪ್ರೈಮೇಟ್’ ಪ್ರಭೇದ ಎಂದು ಕರೆಯುವ ಮೂಲಕ ಇಂಗ್ಲೆಂಡ್ ಮಾಜಿ ಕ್ರಿಕೆಟ್ ಆಟಗಾರ್ತಿ, ಕ್ರಿಕೆಟ್ ವಿಶ್ಲೇಷಕಿ ಇಶಾ ಗುಹಾ ಅವರು ವಿವಾದಕ್ಕೀಡಾಗಿದ್ದಾರೆ.
ಟೆಸ್ಟ್ ಪಂದ್ಯದ ಎರಡನೇ ದಿನವಾದ ಭಾನುವಾರ ಆಸ್ಟ್ರೇಲಿಯಾದ ಆರಂಭಿಕ ಆಟಗಾರರಾದ ಉಸ್ಮಾನ್ ಖ್ವಾಜಾ ಮತ್ತು ನೇಥನ್ ಮೆಕ್‌ಸ್ವೀನಿ ಅವರನ್ನು ಬೂಮ್ರಾ ಔಟ್ ಮಾಡಿದ್ದರು. ಈ ಕುರಿತು ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಅವರು ಭಾರತೀಯ ಬೌಲರ್ ಅನ್ನು ಹೊಗಳಿದ್ದಕ್ಕೆ ಪ್ರತಿಕ್ರಿಯೆಯಾಗಿ ಗುಹಾ ಅವರು ಬೂಮ್ರಾ ಅತ್ಯಮೂಲ್ಯ ‘ಪ್ರೈಮೇಟ್’ ಪ್ರಭೇದ ಎಂದು ಕಾಮೆಂಟ್ ಮಾಡಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ಇಶಾ ಗುಹಾ ಹೇಳಿಕೆ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಅವರು ತಮ್ಮ ಜನಾಂಗೀಯ ಹೇಳಿಕೆ ಕುರಿತು ಕ್ಷಮೆಯಾಚಿಸಿದ್ದಾರೆ. ‘ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಅದ್ಭುತ ಪ್ರದರ್ಶನವನ್ನು ವಿವರಿಸುವ ವೇಳೆ ತಪ್ಪಾದ ಪದವನ್ನು ಬಳಸಿದ್ದಕ್ಕಾಗಿ ನನ್ನನ್ನು ಕ್ಷಮಿಸಿ’ ಎಂದು ಅವರು ಹೇಳಿದ್ದಾರೆ.
‘ನಿನ್ನೆಯ ಕಾಮೆಂಟರಿಯಲ್ಲಿ ನಾನು ಹಲವಾರು ವಿಭಿನ್ನ ರೀತಿಯಲ್ಲಿ ಅರ್ಥೈಸಬಹುದಾದ ಪದವನ್ನು ಬಳಸಿದ್ದೇನೆ. ನನ್ನ ಪದ ಬಳಕೆಯಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸಲು ಬಯಸುತ್ತೇನೆ’ ಎಂದು ಗುಹಾ ಹೇಳಿದ್ದಾರೆ.
‘ನಾನು ಇತರರ ಬಗ್ಗೆ ಸಹಾನುಭೂತಿ ಮತ್ತು ಗೌರವಿಸುವ ಗುಣವನ್ನು ಹೊಂದಿದ್ದೇನೆ. ನೀವು ಸಂಪೂರ್ಣ ಕಾಮೆಂಟರಿಯನ್ನು ಕೇಳಿದರೆ ನಾನು ಭಾರತದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಬೂಮ್ರಾ ಅವರ ಆಟದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದೇನೆ. ನಾನು ಇಷ್ಟಪಡುವ ಆಟಗಾರರಲ್ಲಿ ಬೂಮ್ರಾ ಕೂಡ ಒಬ್ಬರಾಗಿದ್ದಾರೆ. ನನ್ನ ಕಾಮೆಂಟರಿಯಲ್ಲಿ ಯಾವುದೇ ದುರುದ್ದೇಶವಿರಲಿಲ್ಲ’ ಎಂದು ಗುಹಾ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.