ADVERTISEMENT

ಅಕ್ಮಲ್ ಮನವಿ ಆಲಿಸಲಿರುವ ನಿವೃತ್ತ ನ್ಯಾಯಾಧೀಶರು

ಪಿಟಿಐ
Published 31 ಮೇ 2020, 19:30 IST
Last Updated 31 ಮೇ 2020, 19:30 IST
ಉಮರ್ ಅಕ್ಮಲ್
ಉಮರ್ ಅಕ್ಮಲ್   

ಕರಾಚಿ: ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿದ ವಿಷಯ ಬಚ್ಚಿಟ್ಟದ್ದಕ್ಕಾಗಿ ಮೂರು ವರ್ಷಗಳ ನಿಷೇಧ ಶಿಕ್ಷೆಗೆ ಒಳಗಾಗಿರುವ ಪಾಕ್ ಕ್ರಿಕೆಟಿಗ ಉಮರ್ ಅಕ್ಮಲ್ ಅವರ ಮನವಿಯನ್ನು ಸುಪ್ರಿಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಫಕೀರ್ ಮುಹಮ್ಮದ್ ಖೋಖಾರ್ ಆಲಿಸಲಿದ್ದಾರೆ.

ಅಕ್ಮಲ್ ಪ್ರಕರಣದ ವಿಚಾರಣೆಗೆ ಫಕೀರ್ ಅವರನ್ನು ಸ್ವತಂತ್ರ ತೀರ್ಪುಗಾರರಾಗಿ ನೇಮಕ ಮಾಡಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾನುವಾರ ತಿಳಿಸಿದೆ.

ಫೆಬ್ರುವರಿಯಲ್ಲಿ ನಡೆದಿದ್ದ ಪಾಕಿಸ್ತಾನ ಸೂಪರ್ ಲೀಗ್‌ಗೂ ಮುನ್ನ ಬುಕ್ಕಿಗಳು ತಮ್ಮನ್ನು ಸಂಪರ್ಕಿಸಿದ್ದ ವಿಷಯವನ್ನು ಹೇಳದೇ ಇದ್ದದ್ದು ತಪ್ಪು ಎಂದು ಹೇಳಿದ್ದ ಮಂಡಳಿ ಕಳೆದ ತಿಂಗಳು ಅಕ್ಮಲ್ ಮೇಲೆ ನಿಷೇಧ ಹೇರಿತ್ತು. ಇದನ್ನು ಪ್ರಶ್ನಿಸಿ ಅಕ್ಮಲ್ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದಲ್ಲಿ ತಮಗೆ ನೆರವು ನೀಡಲು ಪ್ರಧಾನಮಂತ್ರಿಗಳ ಸಲಹೆಗಾರ ಬಾಬರ್ ಅವಾನ್ ಅವರ ಕಾನೂನು ಸಂಸ್ಥೆಯನ್ನು ಅಕ್ಮಲ್ ಸಂಪರ್ಕಿಸಿದ್ದಾರೆ ಎಂದು ಕ್ರೀಡಾ ವೆಬ್‌ಸೈಟ್ ಒಂದು ವರದಿ ಮಾಡಿದೆ.

ADVERTISEMENT

ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ಅಕ್ಮಲ್ ಅವರು ಕ್ವೆಟ್ಟಾ ಗ್ಲೇಡಿಯೇಟರ್ಸ್ ತಂಡವನ್ನು ಪ್ರತಿನಿಧಿಸಬೇಕಾಗಿತ್ತು. ಆದರೆ ಈ ತಂಡದ ಮೊದಲ ಪಂದ್ಯಕ್ಕೂ ಮುನ್ನ ಅವರನ್ನು ಅಮಾನತು ಮಾಡಲಾಗಿತ್ತು.

ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ನಿಗ್ರಹ ನೀತಿಯ 2.4.4 ನಿಯಮವನ್ನು ಅಕ್ಮಲ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಅವರ ಕಿರಿಯ ಸಹೋದರನೂ ತಂಡದ ಹಾಲಿ ನಾಯಕ ಬಾಬರ್ ಆಜಂ ಸಹೋದರ ಸಂಬಂಧಿಯೂ ಆದ ಉಮರ್ ಕಳೆದ ಅಕ್ಟೋಬರ್‌ನಲ್ಲಿ ಪಾಕಿಸ್ತಾನ ಪರ ಕೊನೆಯ ಪಂದ್ಯ ಆಡಿದ್ದರು. 16 ಟೆಸ್ಟ್‌, 121 ಏಕದಿನ ಮತ್ತು 84 ಟ್ವೆಂಟಿ–20 ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರುವ ಅವರು ಕ್ರಮವಾಗಿ 1003, 3194 ಮತ್ತು 1690 ರನ್‌ ಕಲೆ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.