ADVERTISEMENT

ವಿರಾಟ್ ಕೊಹ್ಲಿ ಕಾಲಘಟ್ಟದಲ್ಲಿ ಆಡುತ್ತಿರುವುದು ಭಾಗ್ಯ

ಭಾರತ ಕ್ರಿಕೆಟ್ ತಂಡದ ನಾಯಕನನ್ನು ಶ್ಲಾಘಿಸಿದ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್‌

ಪಿಟಿಐ
Published 7 ಜೂನ್ 2020, 20:12 IST
Last Updated 7 ಜೂನ್ 2020, 20:12 IST
ವಿರಾಟ್ ಕೊಹ್ಲಿ ಮತ್ತು ಕೇನ್‌ ವಿಲಿಯಮ್ಸನ್   –ಎಎಫ್‌ಪಿ ಚಿತ್ರ
ವಿರಾಟ್ ಕೊಹ್ಲಿ ಮತ್ತು ಕೇನ್‌ ವಿಲಿಯಮ್ಸನ್   –ಎಎಫ್‌ಪಿ ಚಿತ್ರ   

ಮುಂಬೈ: ವಿರಾಟ್ ಕೊಹ್ಲಿ ಆಡುತ್ತಿರುವ ಕಾಲಘಟದಲ್ಲಿ ತಾವು ಕೂಡ ಆಡುತ್ತಿರುವುದು ತಮ್ಮ ಸೌಭಾಗ್ಯ ಎಂದು ನ್ಯೂಜಿಲೆಂಡ್ ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

ಕೇನ್ ಮತ್ತು ವಿರಾಟ್ ಅವರು 2008ರಲ್ಲಿ ಮಲೇಷ್ಯಾದಲ್ಲಿ ನಡೆದಿದ್ದ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಆಡಿದ್ದರು. ಇಬ್ಬರೂ ತಮ್ಮ ದೇಶಗಳ ತಂಡದ ನಾಯಕತ್ವದ ವಹಿಸಿದ್ದರು. ಸೆಮಿಫೈನಲ್‌ನಲ್ಲಿ ವಿರಾಟ್ ಬಳಗವು ನ್ಯೂಜಿಲೆಂಡ್ ವಿರುದ್ಧ ಜಯಿಸಿತ್ತು. ಆಗ ಭಾರತದ ಯುವಪಡೆಯು ಚಾಂಪಿಯನ್ ಆಗಿತ್ತು. ಆ ತಂಡದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜ ಕೂಡ ಇದ್ದರು. ಕಿವೀಸ್ ಬಳಗದಲ್ಲಿ ಟ್ರೆಂಟ್ ಬೌಲ್ಟ್‌ ಮತ್ತು ಟಿಮ್ ಸೌಥಿ ಆಡಿದ್ದರು.

ಸ್ಟಾರ್‌ ಸ್ಫೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ತಮ್ಮ ಕ್ರಿಕೆಟ್ ಪಯಣವನ್ನು ನೆನಪಿಸಿಕೊಂಡಿರುವ ಕೇನ್, ‘ಯುವ ತಂಡದಲ್ಲಿದ್ದಾಗಲೇ ನಾನು ಮತ್ತು ಕೊಹ್ಲಿ ಭೇಟಿಯಾಗಿದ್ದು ಮತ್ತು ಮುಖಾಮುಖಿಯಾಗಿ ಆಡಿದ್ದು ಅವಿಸ್ಮರಣೀಯ. ಆಗಿನಿಂದಲೂ ಅವರ ಬೆಳವಣಿಗೆಯನ್ನು ಕುತೂಹಲದಿಂದ ಗಮನಿಸುತ್ತಿದ್ದೇನೆ. ಅತ್ಯಂತ ಅಮೋಘವಾದ ಸಾಧನೆಗೆ ಸಾಕ್ಷಿಯಾಗಿದ್ದೇನೆ’ ಎಂದಿದ್ದಾರೆ.

ADVERTISEMENT

ಹೋದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ರನ್ನರ್ಸ್ ಅಪ್ ಆಗಿತ್ತು.

‘ಬಹಳ ಸುದೀರ್ಘ ಕಾಲದಿಂದ ನಾವಿಬ್ಬರೂ ಕ್ರಿಕೆಟ್‌ ಕಣದಲ್ಲಿದ್ದೇವೆ. ಅಷ್ಟೇ ಕಾಲದಿಂದ ಮುಖಾಮುಖಿಯಾಗುತ್ತಿದ್ದೇವೆ. ಕಳೆದ ಕೆಲವು ವರ್ಷಗಳಿಂದ ನಾವು ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೇವೆ. ಕೆಲವು ಯೋಚನೆಗಳಲ್ಲಿ ನಮ್ಮಿಬ್ಬರದ್ದು ಒಂದೇ ರೀತಿಯ ಅಭಿಪ್ರಾಯ ವ್ಯಕ್ತವಾಗುತ್ತದೆ. ಆದರೆ ಇಬ್ಬರೂ ಆಡುವ ಶೈಲಿಯಲ್ಲಿ ಕೆಲವು ವ್ಯತ್ಯಾಸಗಳಿವೆ. ಕ್ರೀಡಾಂಗಣದಲ್ಲಿ ತೋರ್ಪಡಿಸುವ ನಡವಳಿಕೆಗಳಲ್ಲಿಯೂ ಕೊಂಚ ವ್ಯತ್ಯಾಸಗಳಿರಬಹುದು. ಆದರೆ ವಿಚಾರಗಳನ್ನು ಪ್ರಾಮಾಣಿಕವಾಗಿ ಮಂಡಿಸುತ್ತೇವೆ’ ಎಂದು ಕೇನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.