ADVERTISEMENT

ಅವರು ತರಬೇತಿ ಮಾತ್ರ ಕೊಡುತ್ತಾರೆ: ಗಂಭೀರ್ ಪರ ಭಾರತ ಮಾಜಿ ನಾಯಕನ ಬ್ಯಾಟಿಂಗ್

ಪಿಟಿಐ
Published 27 ನವೆಂಬರ್ 2025, 9:40 IST
Last Updated 27 ನವೆಂಬರ್ 2025, 9:40 IST
ಗೌತಮ್ ಗಂಭೀರ್ 
ಗೌತಮ್ ಗಂಭೀರ್    

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲುತ್ತಿದ್ದಂತೆ ಟೀಂ ಇಂಡಿಯಾ ಮುಖ್ಯ ತರಬೇತುದಾರ ಗೌತಮ್ ಗಂಭೀರ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ. ಅವರು ರಾಜೀನಾಮೆ ನೀಡಬೇಕೆಂದು ಅನೇಕರು ಆಗ್ರಹಿಸುತ್ತಿದ್ದಾರೆ. ಈ ನಡುವೆ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರು ಗಂಭೀರ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಗೌತಮ್ ಗಂಭೀರ್ ಅವರ ವಿರುದ್ಧ ಬರುತ್ತಿರುವ ಟೀಕೆಗಳ ಕುರಿತು ಪ್ರತಿಕ್ರಿಯೆ ನೀಡಿರುವ ಗವಾಸ್ಕರ್ ‘ತಂಡವನ್ನು ಸಿದ್ಧಪಡಿಸುವುದು ಮಾತ್ರ ಕೋಚ್ ಕೆಲಸ. ಮೈದಾನದಲ್ಲಿ ಪ್ರದರ್ಶನ ನೀಡಬೇಕಿರುವುದು ಆಟಗಾರರೇ ಹೊರತು ಕೋಚ್ ಅಲ್ಲ’ ಎಂದು ಹೇಳಿದ್ದಾರೆ.

ಗಂಭೀರ್ ನೇತೃತ್ವದಲ್ಲಿ ಭಾರತ ಕ್ರಿಕೆಟ್ ತಂಡ ಕಳೆದ 16 ತಿಂಗಳ ಅವಧಿಯಲ್ಲಿ ಮೂರನೇ ಟೆಸ್ಟ್ ಸರಣಿಯಲ್ಲಿ ಸೋತಿದೆ. ನ್ಯೂಜಿಲೆಂಡ್ ವಿರುದ್ಧ 0-3, ಆಸ್ಟ್ರೇಲಿಯಾ ವಿರುದ್ಧ 1-3 ಮತ್ತು ಈಗ ದಕ್ಷಿಣ ಆಫ್ರಿಕಾ ವಿರುದ್ಧ 0–2 ಅಂತರದಿಂದ ಸೋತಿದೆ.

ADVERTISEMENT

‘ಗಂಭೀರ್ ಒಬ್ಬ ಅನುಭವಿ ತರಬೇತುದಾರ. ಅವರು ತಂಡವನ್ನು ಸಿದ್ಧಪಡಿಸಬಹುದು. ಆದರೆ, ಮೈದಾನದಲ್ಲಿ ಪ್ರದರ್ಶನ ನೀಡಬೇಕಾದವರು ಆಟಗಾರರು’ ಎಂದು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಗವಾಸ್ಕರ್ ಹೇಳಿದ್ದಾರೆ.

’ಈಗಿನ ಸೋಲುಗಳಿಗೆ ಗಂಭೀರ್‌ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತಿರುವವರಿಗೆ ನನ್ನ ಪ್ರಶ್ನೆ ಏನು ಅಂದರೆ, ಗಂಭೀರ್ ನೇತೃತ್ವದಲ್ಲಿ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಗೆದ್ದಾಗ ನೀವು ಏನು ಮಾಡಿದ್ದೀರಿ? ಅವರ ಅಡಿಯಲ್ಲಿ ಏಷ್ಯಾಕಪ್ ಗೆದ್ದಾಗ ಏನು ಹೇಳಿದ್ದೀರಿ?

‘ಗೆದ್ದಾಗ ಗಂಭೀರ್ ಅವರನ್ನು ತರಬೇತುದಾರರನ್ನಾಗಿ ಜೀವನದ ಕೊನೆವರೆಗೂ ನೇಮಿಸಿ ಎಂದು ನೀವು ಕೇಳಿದ್ರಾ?. ನೀವು ಅಂದು ಹಾಗೆ ಹೇಳಿಲ್ಲ. ಆದರೆ, ತಂಡ ಸೋಲುತ್ತಿದ್ದಂತೆ ಅವರ ರಾಜೀನಾಮೆ ಕೇಳುತ್ತಿದ್ದೀರಿ ಇದು ಎಷ್ಟು ಸರಿ’? ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.