ADVERTISEMENT

ಸೋಲಿನ ಸುಳಿ: ಗೌತಿ ಕೋಚ್ ಆದ ಬಳಿಕ 'ಗಂಭೀರ’ ಸ್ಥಿತಿಯಲ್ಲಿ ಟೀಂ ಇಂಡಿಯಾ

ಸತತ ಸರಣಿ ಸೋಲುಗಳಿಂದ ಕಂಗೆಟ್ಟ ಭಾರತ

Dinesha R
Published 20 ಜನವರಿ 2026, 13:30 IST
Last Updated 20 ಜನವರಿ 2026, 13:30 IST
ಗೌತಮ್‌ ಗಂಭೀರ್
ಗೌತಮ್‌ ಗಂಭೀರ್   

ಭಾರತದಲ್ಲಿ ಬೇರೆ ಕ್ರೀಡೆಗಳಿಗೆ ಹೋಲಿಸಿದರೆ ಕ್ರಿಕೆಟ್‌ಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಇದನ್ನು ಒಂದು ಹಬ್ಬದಂತೆ ಸಂಭ್ರಮಿಸುತ್ತಾರೆ. 2023ರ ಟಿ20 ವಿಶ್ವಕಪ್‌ವರೆಗೆ ಭಾರತ ಕ್ರಿಕೆಟ್‌ ತಂಡಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಮುಖ್ಯ ತರಬೇತುದಾರರಾಗಿದ್ದರು. ಅದಾದ ಬಳಿಕ ಗೌತಮ್ ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಂಡರು.

ಗೌತಮ್ ಗಂಭೀರ್ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರರಾದ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಏಷ್ಯಾ ಕ‍‍ಪ್‌ಗಳಲ್ಲಿ ಗೆದ್ದಿರುವುದನ್ನು ಹೊರತುಪಡಿಸಿದರೆ, ಹೇಳಿಕೊಳ್ಳುವಂತ ಪ್ರದರ್ಶನ ತೋರಿಲ್ಲ. ಬದಲಾಗಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡ ಶೋಚನೀಯ ಸ್ಥಿತಿಗೆ ತಲುಪಿದೆ.

ಗಂಭೀರ್ ನೇತೃತ್ವದಲ್ಲಿ ಸೋತ ಸರಣಿಗಳು

2011ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಟ್ರೋಫಿ ಗೆಲ್ಲುವಲ್ಲಿ ಆಟಗಾರನಾಗಿ ಪ್ರಮುಖ ಪಾತ್ರ ವಹಿಸಿದ್ದ ಗಂಭೀರ್ ಅವರು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಕೋಚ್ ಆಗಿ ಯಶಸ್ಸು ಸಾಧಿಸಿದ್ದರು. ಅಲ್ಲಿನ ಯಶಸ್ಸಿನ ಬೆನ್ನಲ್ಲೆ, ಗಂಭೀರ್ ಅವರನ್ನು ಜುಲೈ 2024ರಿಂದ ಟೀಂ ಇಂಡಿಯಾದ ಮುಖ್ಯ ತರಬೇತುದಾರರನ್ನಾಗಿ ಬಿಸಿಸಿಐ ನೇಮಕ ಮಾಡಿದೆ.

ADVERTISEMENT

ತವರಿನಲ್ಲಿ ಭಾರತ ತಂಡದ ಹೀನಾಯ ಪ್ರದರ್ಶನ

2024ರಲ್ಲಿ ಭಾರತದ‌ಲ್ಲಿ ಮುಕ್ತಾಯಗೊಂಡ 3 ಪಂದ್ಯಗಳ ಟೆಸ್ಟ್ ಸರಣಿಯನ್ನು 3–0 ಅಂತರದಲ್ಲಿ ವೈಟ್‌ವಾಶ್ ಆಗುವ ಮೂಲಕ 2025ರ ಐಸಿಸಿ ಟೆಸ್ಟ್ ಚಾಂಪಿಯನ್ ಟ್ರೋಫಿ ಫೈನಲ್ ತಲುಪುವ ಅವಕಾಶದಿಂದ ಹೊರಬಿದ್ದಿತ್ತು. ಬಳಿಕ ನವೆಂಬರ್ 2025ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆದ 2 ಪಂದ್ಯಗಳ ಸರಣಿಯಲ್ಲೂ ವೈಟ್‌ವಾಶ್ ಆಗಿತ್ತು.

2026ರ ಮೊದಲ ಸರಣಿ ಸೋಲು

ಜನವರಿ 18ರಂದು ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ಮುಕ್ತಾಯಗೊಂಡ ಮೂರು ಪಂದ್ಯಗಳ ಏಕದಿನ ಸರಣಿಯನ್ನು 1–2ರ ಅಂತರದಲ್ಲಿ ಸೋಲುವ ಮೂಲಕ ನ್ಯೂಜಿಲೆಂಡ್ ತಂಡದ ವಿರುದ್ಧ ತವರಿನಲ್ಲಿ ಬರೋಬ್ಬರಿ 38 ವರ್ಷಗಳ ಬಳಿಕ ಸರಣಿ ಸೋತ ಅಪಮಾನ ಎದುರಿಸಿದೆ. ಸದ್ಯ, ಈ ಎಲ್ಲಾ ಸೋಲುಗಳು ಗಂಭೀರ್ ಅವರ ಮಾರ್ಗದರ್ಶನದ ಮೇಲೆ ಪ್ರಶ್ನೆಗಳು ಏಳುವಂತೆ ಮಾಡಿದೆ.

ಗಂಭೀರ್ ಕೋಚ್ ಆದ ಬಳಿಕ ಟಿ20ಐನಲ್ಲಿ ಭಾರತದ ದಾಖಲೆ

ಒಟ್ಟು ಪಂದ್ಯಗಳು–27

ಗೆಲುವು– 23

ಸೋಲು– 3

ಒಂದು ಪಂದ್ಯ ರದ್ದಾಗಿದೆ

ಗೆಲುವಿನ ಶೇಕಡಾವಾರು: 85.18%

ಗಂಭೀರ್ ಕೋಚ್ ಆದ ಬಳಿಕ ಏಕದಿನ ಸಾಧನೆ

ಆಡಿದ ಪಂದ್ಯಗಳು: 20

ಗೆಲುವು –12

ಸೋಲು–7

ಒಂದು ಪಂದ್ಯ ಡ್ರಾ

ಗೆಲುವಿನ ಶೇಕಡಾವಾರು: 60.00%

ಟೆಸ್ಟ್‌ನಲ್ಲಿ ಗಂಭೀರ್ ದಾಖಲೆ

ಆಡಿದ ಪಂದ್ಯಗಳು: 19

ಗೆಲುವು–7

ಸೋಲು–10

ಡ್ರಾ– 2

ಗೆಲುವಿನ ಶೇಕಡಾವಾರು: 36.84%

ಏಕದಿನ ಹಾಗೂ ಟಿ20 ಕ್ರಿಕೆಟ್‌ಗೆ ಹೋಲಿಕೆ ಮಾಡಿ ನೋಡಿದರೆ ಭಾರತ ತಂಡ ಟೆಸ್ಟ್‌ನಲ್ಲಿ ಶೋಚನೀಯ ಸ್ಥಿತಿ ತಲುಪಿದೆ.

  • 1988ರ ಬಳಿಕ ನ್ಯೂಜಿಲೆಂಡ್ ತಂಡದ ವಿರುದ್ಧ ತವರಿನಲ್ಲಿ ಮೊದಲ ಸರಣಿ ಸೋಲು.

  • ನ್ಯೂಜಿಲೆಂಡ್ ವಿರುದ್ಧದ ಸೋಲು 2012ರ ನಂತರ ಭಾರತಕ್ಕೆ ದೊರೆತ ಮೊದಲ ತವರು ಟೆಸ್ಟ್ ಸರಣಿ ಸೋಲು

  • 2000ನೇ ಇಸವಿ ಬಳಿಕ ಮೊದಲ ಬಾರಿಗೆ ತವರಿನಲ್ಲಿ ನಡೆದ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗ.

  • ತವರಿನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಅತಿ ಕಡಿಮೆ ಸ್ಕೋರ್ - 46 ರನ್‌ಗಳು (ಅಕ್ಟೋಬರ್ 2024)

  • ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಅರ್ಹತೆ ಪಡೆಯುವಲ್ಲಿ ವಿಫಲ.

  • 2015ರ ನಂತರ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿ ಕಳೆದುಕೊಂಡಿರುವುದು.

ಹಿರಿಯ ಆಟಗಾರರ ದಿಢೀರ್ ನಿವೃತ್ತಿ

ಗೌತಮ್ ಗಂಭೀರ್ ಅವರು ಭಾರತ ತಂಡದ ಕೋಚ್ ಆದ ಬಳಿಕ ಹಿರಿಯ ಆಟಗಾರರಾದ ರವಿಚಂದ್ರನ್ ಅಶ್ವಿನ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾರಂತ ಹಿರಿಯ ಆಟಗಾರರು ನಿವೃತ್ತಿ ‍ತೆಗೆದುಕೊಂಡರು. ಇವರ ನಿವೃತ್ತಿ ನಿರ್ಧಾರದ ಹಿಂದೆ ಪರೋಕ್ಷವಾಗಿ ಗಂಭೀರ್ ಅವರೇ ಇದ್ದಾರೆ ಎನ್ನುವುದು ಅನೇಕ ಹಿರಿಯ ಕ್ರಿಕೆಟಿಗರ ಆರೋಪವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.