ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಇ–ಮೇಲ್ ಮೂಲಕ ಕೊಲೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ದೆಹಲಿ ಪೊಲೀಸರು 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಆತನಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಲಾಗಿದೆ.
ಆರೋಪಿಯನ್ನು ಗುಜರಾತ್ ಮೂಲದ ಜಿಗ್ನೇಶ್‌ಸಿನ್ಹ ಪರ್ಮಾರ್ ಎಂದು ಗುರುತಿಸಲಾಗಿದ್ದು, ಶುಕ್ರವಾರ ಆತನನ್ನು ಬಂಧಿಸಲಾಗಿದೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದಂದೇ (ಏಪ್ರಿಲ್ 22) ಈತ ಇ–ಮೇಲ್ ಮೂಲಕ ಗಂಭೀರ್‌ಗೆ ಬೆದರಿಕೆ ಕಳುಹಿಸಿದ್ದ.
‘ಪಾರ್ಮರ್ ಎಂಜಿನಿಯರಿಂಗ್ ವಿದ್ಯಾರ್ಥಿ. ಆತನಿಗೆ ಮಾನಸಿಕ ಆರೋಗ್ಯ ಸಮಸ್ಯೆ ಇದೆ ಎಂದು ಕುಟುಂಬ ಹೇಳಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ’ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಕೇಂದ್ರ) ಎಂ. ಹರ್ಷವರ್ಧನ್ ತಿಳಿಸಿದ್ದಾರೆ.
ಗೌತಮ್ ಗಂಭೀರ್‌ಗೆ ಸೇರಿದ ಇ–ಮೇಲ್ ವಿಳಾಸಕ್ಕೆ ಬೆದರಿಕೆ ಬಂದಿದೆ ಎಂದು ಈ ಹಿಂದೆ ಪೊಲೀಸರು ತಿಳಿಸಿದ್ದರು. ಈ ಸಂಬಂಧ ಸ್ಕ್ರೀನ್ ಶಾಟ್‌ಗಳ ಸಹಿತ ರಾಜಿಂದರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಐಸಿಸ್ ಕಾಶ್ಮೀರ ಎಂದು ಹೇಳಿಕೊಂಡು ಕೊಲೆ ಬೆದರಿಕೆ ಇ–ಮೇಲ್ ಕಳುಹಿಸಲಾಗಿತ್ತು. ಬಿಜೆಪಿಯ ಮಾಜಿ ಸಂಸದರೂ ಆಗಿರುವ ಗಂಭೀರ್ ಅವರಿಗೆ ಈಗಾಗಲೇ ಪೊಲೀಸ್ ಭದ್ರತೆ ಇದೆ. ಹೀಗಾಗಿ ಅವರಿಗೆ ನೀಡಲಾದ ವಿಶೇಷ ಭದ್ರತೆ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಿಲ್ಲ ಎಂದು ಡಿಸಿಪಿ ಹೇಳಿದ್ದಾರೆ.
2022ರಲ್ಲೂ ಗಂಭೀರ್‌ಗೆ ಜೀವ ಬೆದರಿಕೆ ಬಂದಿತ್ತು. ಆ ಬಳಿಕ ಭದ್ರತೆ ಹೆಚ್ಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.