ಗಂಭೀರ್ ಹಾಗೂ ಪಾಂಡ್ಯ ನಡುವಿನ ಮಾತುಕತೆ
ಚಿತ್ರ: @dhohar_07
ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಸೂಪರ್–8 ಪಂದ್ಯದಲ್ಲಿ ಭಾರತ ತಂಡವು ಹೀನಾಯವಾಗಿ ಸೋಲುವ ಮೂಲಕ ನಿರಾಸೆ ಅನುಭವಿಸಿತು. ಮಾತ್ರವಲ್ಲ, ಸೆಮಿಫೈನಲ್ ತಲುಪುವುದು ಕೂಡ ಕಠಿಣ ಎಂಬ ವಾತಾವರಣ ನಿರ್ಮಾಣವಾಗಿದೆ.
ಈ ಪಂದ್ಯದ ನಡುವೆ ಹಾರ್ದಿಕ್ ಪಾಂಡ್ಯ ಹಾಗೂ ಕೋಚ್ ಗೌತಮ್ ಗಂಭೀರ್ ನಡುವಿನ ಮಾತಿನ ಚಕಮಕಿ ನಡೆದಿರುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಅಹಮದಾಬಾದ್‌ನಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಆರಂಭದಲ್ಲಿ ಭಾರತೀಯ ಬೌಲರ್‌ಗಳು ಮೇಲುಗೈ ಸಾಧಿಸಿದರು. ಪವರ್‌ಪ್ಲೇನಲ್ಲಿ ದಕ್ಷಿಣ ಆಫ್ರಿಕಾದ ಪ್ರಮುಖ ಮೂವರು ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಕಳಿಸುವಲ್ಲಿ ಭಾರತೀಯ ವೇಗಿಗಳು ಯಶಸ್ವಿಯಾದರು.
ಆದರೆ, ನಂತದ ಜೊತೆಯಾದ ಡೆವಾಲ್ಡ್ ಬ್ರೆವಿಸ್ ಮತ್ತು ಡೇವಿಡ್ ಮಿಲ್ಲರ್ ಭಾರತೀಯ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಈ ಹಂತದಲ್ಲಿ ಬೌಂಡರಿ ಗೆರೆ ಬಳಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ವಿರುದ್ಧ ತರಬೇತುದಾರ ಗೌತಮ್ ಗಂಭೀರ್ ಬೇಸರ ವ್ಯಕ್ತಪಡಿಸಿದ ಘಟನೆ ನಡೆಯಿತು. ಈ ವೇಳೆ ಪಾಂಡ್ಯ ಕೂಡ ಗಂಭೀರ್ ಜೊತೆ ಮಾತುಕತೆಗೆ ಇಳಿದಿದ್ದಾರೆ.
ಆ ಇಬ್ಬರ ನಡುವಿನ ಮಾತುಕತೆ ಏನು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲವಾದರೂ, ಗಂಭೀರ್ ಕೋಪಗೊಂಡು ಮಾತನಾಡಿರುವುದು ಮುಖಭಾವದಲ್ಲಿ ಸ್ಪಷ್ಟವಾಗಿತ್ತು.
ಏನಿದು ಘಟನೆ?
ದಕ್ಷಿಣ ಆಫ್ರಿಕಾದ ಬ್ಯಾಟರ್ ಮಿಲ್ಲರ್ ಹಾಗೂ ಬ್ರೇವಿಸ್ ಬ್ಯಾಟಿಂಗ್ ಮಾಡುವಾಗ, ವರುಣ್ ಚಕ್ರವರ್ತಿಯವರ 12ನೇ ಓವರ್‌ನಲ್ಲಿ ಮಿಲ್ಲರ್ ಅವರು ಭರ್ಜರಿ ಬೌಂಡರಿ ಬಾರಿಸುತ್ತಾರೆ. ಆ ವೇಳೆಗೆ ಆಗಲೆ ದಕ್ಷಿಣ ಆಫ್ರಿಕಾ ತಂಡ 100ರನ್‌ಗಳ ಗಡಿ ದಾಟಿತ್ತು.
ಆ ಸಂದರ್ಭದಲ್ಲಿ ಬೌಂಡರಿ ಗೆರೆ ಬಳಿ ನಿಂತಿದ್ದ ಪಾಂಡ್ಯರ ಜೊತೆ ಮಾತಿಗೆ ಇಳಿದ ಗಂಭೀರ್, ನಮ್ಮ ಯೋಜನೆಯ ಪ್ರಕಾರ ಯಾವುದೂ ನಡೆಯುತ್ತಿಲ್ಲ ಎಂಬಂತೆ ಪಾಂಡ್ಯ ಅವರನ್ನು ಪ್ರಶ್ನಿಸುತ್ತಾರೆ. ಅದಕ್ಕೆ ಪಾಂಡ್ಯ ಕೂಡ ಪ್ರತ್ಯುತ್ತರ ನೀಡುತ್ತಾರೆ. ಈ ಇಬ್ಬರ ಮಾತುಕತೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಪಂದ್ಯದ ಉದ್ದಕ್ಕೂ ತಾಳ್ಮೆ ಕಳೆದುಕೊಂಡಿದ್ದ ಗಂಭೀರ್ ಅವರು ಪದೇ ಪದೇ ಸಿಟ್ಟಾಗುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.