ಗೌತಮ್ ಗಂಭೀರ್
(ಪಿಟಿಐ ಚಿತ್ರ)
ನವದೆಹಲಿ: ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಿರುವ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಯುವ ವೇಗಿ ಹರ್ಷಿತ್ ರಾಣಾ ಕುರಿತು ಅನೇಕ ಟೀಕೆಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ಭಾರತ ತಂಡದ ಮಾಜಿ ನಾಯಕ ಶ್ರೀಕಾಂತ್ ಅವರು ಗೌತಮ್ ಗಂಭೀರ್ ಸಮ್ಮತಿಯಿಂದಲೇ ರಾಣಾರನ್ನು ಆಸಿಸ್ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದರು. ಈ ಹೇಳಿಕೆಗೆ ಗಂಭೀರ್ ತಿರುಗೇಟು ನೀಡಿದ್ದಾರೆ.
ಗಂಭೀರ್ ಕಾರಣದಿಂದಾಗಿಯೇ ರಾಣಾ ಅವರನ್ನು ರಾಷ್ಟ್ರೀಯ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಆರೋಪಿಸಿದ್ದರು.
ಈ ಹೇಳಿಕೆಗೆ ಗೌತಮ್ ಗಂಭೀರ್ ತಿರುಗೇಟು ನೀಡಿದ್ದಾರೆ. 'ತನ್ನದೇ ಯೂಟ್ಯೂಬ್ ಚಾನೆಲ್ ನಡೆಸಲು ಬಯಸುವ ವ್ಯಕ್ತಿ 23 ವರ್ಷದ ಯುವಕನನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಾರೆ ಅಂದರೆ ಅದು ನಾಚಿಕೆಗೇಡಿನ ಸಂಗತಿ. ನೀವು ನನ್ನನ್ನು ಟೀಕಿಸಲು ಬಯಸಿದರೆ ಅದನ್ನು ನೇರವಾಗಿ ಮಾಡಿ. ನಾನು ಅದನ್ನು ನಿಭಾಯಿಸಬಲ್ಲೆ. ಆದರೆ, ಯೂಟ್ಯೂಬ್ ವೀಕ್ಷಣೆ ಹೆಚ್ಚಿಸಿಕೊಳ್ಳಲು ಒಬ್ಬ ಯುವಕನನ್ನು ಟ್ರೋಲ್ ಮಾಡುವುದು ನಾಚಿಕೆಗೇಡಿನ ಸಂಗತಿ' ಎಂದು ಕಿಡಿಕಾರಿದರು.
ಮುಂದುವರೆದು ಮಾತನಾಡಿದ ಗೌತಿ,‘ರಾಣಾ ಅವರ ತಂದೆ ಆಯ್ಕೆದಾರರಲ್ಲ. ಆತ ಸ್ವಂತ ಅರ್ಹತೆಯಿಂದ ಕ್ರಿಕೆಟ್ ಆಡಿದ್ದಾನೆ ಮತ್ತು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದಾನೆ. ಆ ಯುವಕನನ್ನು ಗುರಿಯಾಗಿರಿಸಿಕೊಳ್ಳಬೇಡಿ' ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.