ADVERTISEMENT

ಸನ್ನಿ ಹೇಳಿಕೆ ವಿವಾದ: ಅನುಷ್ಕಾ ಗರಂ

ವೀಕ್ಷಕ ವಿವರಣೆಕಾರರ ತಂಡದಿಂದ ಗಾವಸ್ಕರ್ ಅವರನ್ನು ಕೈಬಿಡುವಂತೆ ಆರ್‌ಸಿಬಿ ಅಭಿಮಾನಿಗಳ ಆಗ್ರಹ

ಪಿಟಿಐ
Published 25 ಸೆಪ್ಟೆಂಬರ್ 2020, 16:50 IST
Last Updated 25 ಸೆಪ್ಟೆಂಬರ್ 2020, 16:50 IST
ಸುನಿಲ್ ಗಾವಸ್ಕರ್ –ಎಎಫ್‌ಪಿ ಚಿತ್ರ
ಸುನಿಲ್ ಗಾವಸ್ಕರ್ –ಎಎಫ್‌ಪಿ ಚಿತ್ರ   

ದುಬೈ: ಐಪಿಎಲ್‌ ಟೂರ್ನಿಯ ಕಿಂಗ್ಸ್ ಇಲೆವನ್ ಎದುರಿನ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿನ ನಂತರ ಖ್ಯಾತ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಬಗ್ಗೆ ನೀಡಿರುವ ಆಕ್ಷೇಪಾರ್ಹ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.

ಗಾವಸ್ಕರ್ ಅವರ ಹೇಳಿಕೆಗೆ ಅನುಷ್ಕಾ ಶರ್ಮಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಆರ್‌ಸಿಬಿ ಮತ್ತು ಕೊಹ್ಲಿ ಅಭಿಮಾನಿಗಳು ಗಾವಸ್ಕರ್ ಅವರನ್ನು ವೀಕ್ಷಕ ವಿವರಣೆಕಾರರ ತಂಡದಿಂದ ತೆಗೆದುಹಾಕಬೇಕು ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ದುಬೈಯಲ್ಲಿ ಗುರುವಾರ ರಾತ್ರಿ ನಡೆದಿದ್ದ‍ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಆರ್‌ಸಿಬಿಯನ್ನು 97 ರನ್‌ಗಳಿಂದ ಮಣಿಸಿತ್ತು. ಪಂದ್ಯದಲ್ಲಿ ಕೊಹ್ಲಿ ಕೇವಲ ಒಂದು ರನ್ ಗಳಿಸಿದ್ದರು.

ADVERTISEMENT

ಕಿಂಗ್ಸ್ ಇಲೆವನ್ ಇನಿಂಗ್ಸ್‌ನಲ್ಲಿ ರಾಹುಲ್ ಶತಕ ಗಳಿಸುವುದಕ್ಕೂ ಮೊದಲು, 17 ಹಾಗೂ 18ನೇ ಓವರ್‌ನಲ್ಲಿ ಎರಡು ಕ್ಯಾಚ್‌ಗಳ‌ನ್ನು ಕೊಹ್ಲಿ ಕೈಚೆಲ್ಲಿದ್ದರು. ಆಗ ರಾಹುಲ್ ಕ್ರಮವಾಗಿ 83 ಮತ್ತು 89 ರನ್‌ ಗಳಿಸಿದ್ದರು. ಕ್ಯಾಚ್ ಕೈಚೆಲ್ಲಿದ್ದು ತಂಡಕ್ಕೆ ದುಬಾರಿಯಾಗಿತ್ತು. ಶತಕ ಗಳಿಸಿದ ರಾಹುಲ್‌, ಟೂರ್ನಿ
ಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನೂ ಬರೆದರು.

ವೀಕ್ಷಕ ವಿವರಣೆಯಲ್ಲಿ ಗಾವಸ್ಕರ್, ‘ಲಾಕ್‌ಡೌನ್ ವೇಳೆ ಅನುಷ್ಕಾ ಅವರ ಬೌಲಿಂಗ್‌ಗೇ ಕೊಹ್ಲಿ ಹೆಚ್ಚು ಉತ್ತರಿಸಿದ್ದಾರೆ. ಅದು ಇಲ್ಲಿ ಪ್ರಯೋಜನಕ್ಕೆ ಬರಲಿಲ್ಲ’ ಎಂದು ಹಿಂದಿಯಲ್ಲಿ ಹೇಳಿ ದ್ದರು. ಇದು ಸದಭಿರುಚಿಯ ಹೇಳಿಕೆಯಲ್ಲ ಎಂದು ಅನುಷ್ಕಾ ಪ್ರತಿಕ್ರಿಯಿಸಿದ್ದರು. ಗಾವಸ್ಕರ್ ಸ್ಪಷ್ಟನೆ ನೀಡಬೇಕು ಎಂದೂ ಆಗ್ರಹಿಸಿದ್ದರು.

‘ಗೌರವಾನ್ವಿತ ಗಾವಸ್ಕರ್ ಅವರೇ, ಪಂದ್ಯದಲ್ಲಿ ಪತಿಯ ಸಾಮರ್ಥ್ಯಕ್ಕೂ ಪತ್ನಿಯ ಜೊತೆಗಿನ ಸಂಬಂಧಕ್ಕೂ ತಾಳೆ ಹಾಕಿ ಹೇಳಿಕೆ ನೀಡುವಂಥ ಚಾಳಿ ನಿಮಗೆ ಯಾಕೆ ಬಂತು ಎಂಬುದು ಅರ್ಥವಾಗುತ್ತಿಲ್ಲ. ಇಷ್ಟು ವರ್ಷ ಕ್ರಿಕೆಟಿಗರ ಖಾಸಗಿ ಜೀವನದ ಬಗ್ಗೆ ನೀವು ಇಷ್ಟೇನಾ ಗೌರವ ಹೊಂದಿರುವುದು?’ ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದಿದ್ದಾರೆ.

ಸ್ಪಷ್ಟನೆ ನೀಡಿದ ಗಾವಸ್ಕರ್:ತಮ್ಮ ಹೇಳಿಕೆಗೆ ಸಂಬಂಧಿಸಿ ಗುರುವಾರ ಸಂಜೆ ಸ್ಪಷ್ಟನೆ ನೀಡಿರುವ ಗಾವಸ್ಕರ್ ‘ಲಾಕ್‌ಡೌನ್ ಸಂದರ್ಭದಲ್ಲಿ ಮನೆಯ ಆವರಣದಲ್ಲಿ ಕೊಹ್ಲಿಗೆ ಅನುಷ್ಕಾ ಟೆನಿಸ್ ಬಾಲ್‌ನಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೊ ನೋಡಿದ್ದೆ. ಅದನ್ನಷ್ಟೇ ನಾನು ಪ್ರಸ್ತಾಪಿಸಿದ್ದೆ. ಸಾಕಷ್ಟು ಅಭ್ಯಾಸ ಮಾಡಲು ಅವಕಾಶ ಸಿಗಲಿಲ್ಲ ಎಂಬುದನ್ನು ಹೇಳಲು ಆ ಮಾತನ್ನು ಬಳಸಿದ್ದೆ’ ಎಂದಿದ್ದಾರೆ.

ನಿಧಾನಗತಿಯಲ್ಲಿ ಆಡಿದ ತಂಡ; ಕೊಹ್ಲಿಗೆ ದಂಡ
ದುಬೈ: ಕಿಂಗ್ಸ್ ಇಲೆವನ್ ಪಂಜಾಬ್ ಎದುರಿನ ಪಂದ್ಯದಲ್ಲಿ ಆರ್‌ಸಿಬಿ ತಂಡ ನಿಗದಿತ ಅವಧಿಯಲ್ಲಿ ಬೌಲಿಂಗ್ ಪೊರ್ತಿಗೊಳಿಸದ ಕಾರಣ ನಾಯಕ ವಿರಾಟ್ ಕೊಹ್ಲಿ ಅವರಿಗೆ ₹ 12 ಲಕ್ಷ ದಂಡ ವಿಧಿಸಲಾಗಿದೆ.

‘ಈ ಆವೃತ್ತಿಯಲ್ಲಿ ಕೊಹ್ಲಿ ಬಳಗ ಎಸಗಿದ ಮೊದಲ ತಪ್ಪು ಇದು. ಐಪಿಎಲ್ ನಿಯಮಾವಳಿಗಳ ಪ್ರಕಾರ ತಂಡದ ನಾಯಕನಿಗೆ ದಂಡ ವಿಧಿಸಲಾಗಿದೆ‘ ಎಂದು ಐಪಿಎಲ್ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.