ADVERTISEMENT

ಅಂತಿಮ ಏಕದಿನದಲ್ಲೂ ಗೆಲುವು; ವಿಂಡೀಸ್ ವಿರುದ್ಧ ಭಾರತ ಕ್ಲೀನ್‌ಸ್ವೀಪ್ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2022, 1:12 IST
Last Updated 28 ಜುಲೈ 2022, 1:12 IST
ಭಾರತಕ್ಕೆ ಏಕದಿನ ಸರಣಿ ಗೆಲುವು
ಭಾರತಕ್ಕೆ ಏಕದಿನ ಸರಣಿ ಗೆಲುವು   

ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ ಮಳೆ ಬಾಧಿತ ಅಂತಿಮ ಏಕದಿನ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ 119 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ 3-0 ಅಂತರದ ಕ್ಲೀನ್‌ಸ್ವೀಪ್ ಜಯ ಸಾಧಿಸಿದೆ.

ಮಳೆಯಿಂದಾಗಿ ಓವರ್‌ಗಳ ಸಂಖ್ಯೆಯನ್ನು ಇಳಿಕೆ ಮಾಡಲಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಶುಭಮನ್ ಗಿಲ್ ಹಾಗೂ ನಾಯಕ ಶಿಖರ್ ಧವನ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೂರು ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತು.

ಶುಭಮನ್ ಗಿಲ್ 98 ರನ್ ಗಳಿಸಿ ಔಟಾಗದೆ ಉಳಿದರು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದರಿಂದ ಚೊಚ್ಚಲ ಶತಕ ಗಳಿಸುವ ಅವಕಾಶದಿಂದ ವಂಚಿತರಾದರು. ನಾಯಕ ಧವನ್ 58 ಹಾಗೂ ಶ್ರೇಯಸ್ ಅಯ್ಯರ್ 44 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಡಕ್ವರ್ಥ್ ಲೂಯಿಸ್ ನಿಯಮದಡಿಯಲ್ಲಿ ವಿಂಡೀಸ್ ಗೆಲುವಿಗೆ 35 ಓವರ್‌ಗಳಲ್ಲಿ 257 ರನ್ ಗುರಿ ಮರುನಿಗದಿಪಡಿಸಲಾಯಿತು. ಆದರೆ ಯಜುವೇಂದ್ರ ಚಾಹಲ್ (17ಕ್ಕೆ 4), ಮೊಹಮ್ಮದ್ ಸಿರಾಜ್ (14ಕ್ಕೆ 2) ಹಾಗೂ ಶಾರ್ದೂಲ್ ಠಾಕೂರ್ (17ಕ್ಕೆ 2) ದಾಳಿಗೆ ನಲುಗಿದ ವಿಂಡೀಸ್ 26 ಓವರ್‌ಗಳಲ್ಲಿ 137 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಭಾರತದ ಪರ ಯಜುವೇಂದ್ರ ಚಾಹಲ್ ನಾಲ್ಕು ಮತ್ತು ಮೊಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ತಲಾ ಎರಡು ವಿಕೆಟ್‌ಗಳನ್ನು ಹಂಚಿಕೊಂಡರು.

ಈ ಮೂಲಕ ಭಾರತ ತಂಡವು ವಿಂಡೀಸ್ ವಿರುದ್ಧ ಸತತ 12ನೇ ಏಕದಿನ ಸರಣಿ ಗೆಲುವು ದಾಖಲಿಸಿದೆ. ಶುಭಮನ್ ಗಿಲ್ ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾದರು.

ಗಿಲ್-ಧವನ್ ಶತಕದ ಜೊತೆಯಾಟ...
ನಾಯಕ ಶಿಖರ್ ಮತ್ತು ಶುಭಮನ್ ಮೊದಲ ವಿಕೆಟ್ ಜೊತೆಯಾಟದಲ್ಲಿ 113 ರನ್‌ ಸೇರಿಸಿದರು. ವಿಂಡೀಸ್ ತಂಡದ ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್, ಜೈಡನ್ ಸೀಲ್ಸ್‌, ಕೀಮೊ ಪಾಲ್ ಅವರ ಎಸೆತಗಳನ್ನು ಶಿಖರ್ ಮತ್ತು ಗಿಲ್ ಜೋಡಿಯು ಲೀಲಾಜಾಲವಾಗಿ ಆಡಿತು.

ಸ್ವಿಂಗ್ ಮತ್ತು ಕಟರ್‌ಗಳಿಗೆ ಬೌಂಡರಿಗೆರೆ ತೋರಿಸಿದರು. ಎಡಗೈ ಬ್ಯಾಟರ್ ಶಿಖರ್ ಮತ್ತು ಪಂಜಾಬಿ ಹುಡುಗ ಗಿಲ್ ಅವರಿಬ್ಬರೂ ಅರ್ಧಶತಕಗಳನ್ನು ದಾಖಲಿಸಿದರು. 22 ಓವರ್‌ಗಳ ಆಟದಲ್ಲಿ ಅವರಿಬ್ಬರ ಏಕಾಗ್ರತೆಯನ್ನು ಭಂಗ ಮಾಡಲು ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.

23ನೇ ಓವರ್‌ನಲ್ಲಿ ಯುವಪ್ರತಿಭೆ ಹೇಡನ್ ವಾಲ್ಶ್ ಈ ಜೊತೆಯಾಟವನ್ನು ಮುರಿಯುವಲ್ಲಿ ಯಶಸ್ವಿಯಾದರು. ಅವರ ಎಸೆತವನ್ನು ಆಡುವ ಭರದಲ್ಲಿ ಶಿಖರ್ ಎಡವಿದರು.

ಬಳಿಕ ಬಂದ ಶ್ರೇಯಸ್‌ ಅಯ್ಯರ್‌ (44 ರನ್‌, 34 ಎ.) ಅವರು ಗಿಲ್‌ಗೆ ಉತ್ತಮ ಸಾಥ್‌ ನೀಡಿದರು. ಗಿಲ್‌ ಶತಕಕ್ಕೆ ಎರಡು ರನ್‌ಗಳು ಬೇಕಿದ್ದಾಗ ಮಳೆಯಿಂದ ಆಟ ನಿಂತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.