ಹಾರ್ದಿಕ್ ಪಾಂಡ್ಯ
ಚಿತ್ರ: @sportstarweb
ರಾಜ್‌ಕೋಟ್: ಭಾರತ ಕ್ರಿಕೆಟ್ ತಂಡದ ಅನುಭವಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅಮೋಘ ಲಯವನ್ನು ಮುಂದುವರೆಸಿದ್ದಾರೆ. ವಿದರ್ಭ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಅವರು, ಇಂದು (ಗುರುವಾರ) ಚಂಡೀಗಢ ವಿರುದ್ಧದ ಪಂದ್ಯದಲ್ಲೂ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯ ಗ್ರೂಪ್ ಹಂತದ ಪಂದ್ಯದಲ್ಲಿ ಬರೋಡ ಹಾಗೂ ಚಂಡೀಗಢ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬರೋಡ ತಂಡದ ಪರ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕೇವಲ 31 ಎಸೆತಗಳಲ್ಲಿ 9 ಸಿಕ್ಸರ್ ಹಾಗೂ 2 ಬೌಂಡರಿ ನೆರವಿನಿಂದ 75 ರನ್ ಸಿಡಿಸಿದರು. ಆ ಮೂಲಕ ಬರೋಡ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಆರಂಭಿಕ ಆಘಾತದ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಪ್ರಿಯಾಂಶು ಮೋಲಿಯಾ (113 ರನ್) ವಿಷ್ಣು ಸೋಲಂಕಿ (54 ರನ್) ಸಿಡಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರುಮಾಡಿದರು.
ಇನ್ನೂ ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ 31 ಎಸೆತಗಳಲ್ಲಿ 75 ರನ್ ಗಳಿಸಿದರು. ಇವರ ಜೊತೆ ವಿಕೆಟ್ ಕೀಪರ್, ಬ್ಯಾಟರ್ ಜಿತೇಶ್ ಶರ್ಮಾ 33 ಎಸೆತಗಳಲ್ಲಿ 73 ರನ್ ಕಲೆಹಾಕಿದರು. ಆ ಮೂಲಕ ತಂಡದ ಮೊತ್ತವನ್ನು 391 ಆಗುವಂತೆ ನೋಡಿಕೊಂಡರು.
392 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಚಂಡೀಗಢ ತಂಡ ಶಿವಂ ಬಾಂಬ್ರಿ (100 ರನ್) ಶತಕದ ಹೊರತಾಗಿಯೂ 242 ರನ್‌ಗಳಿಗೆ ಆಲೌಟ್ ಆಯಿತು. ಆ ಮೂಲಕ ಬರೋಡ ತಂಡ 149 ರನ್‌ಗಳ ಬೃಹತ್ ಗೆಲುವು ದಾಖಲಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.