ADVERTISEMENT

ಮಹಿಳಾ ಪ್ರೀಮಿಯರ್ ಲೀಗ್ | ಸತತ 7 ಬೌಂಡರಿ: ಗೇಲ್, ರೈನಾ ದಾಖಲೆ ಸರಿಗಟ್ಟಿದ ಹರ್ಮನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2023, 10:20 IST
Last Updated 5 ಮಾರ್ಚ್ 2023, 10:20 IST
ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ (ಪಿಟಿಐ ಚಿತ್ರ)
ಹರ್ಮನ್‌ಪ್ರೀತ್ ಕೌರ್ ಬ್ಯಾಟಿಂಗ್ (ಪಿಟಿಐ ಚಿತ್ರ)   

ಮುಂಬೈ: ಮಹಿಳಾ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಮುಂಬೈ ಇಂಡಿಯನ್ಸ್‌ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌, ಅಪರೂಪದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ಮುಂಬೈನ ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಕೇವಲ 30 ಎಸೆತಗಳನ್ನು ಎದುರಿಸಿದ ಹರ್ಮನ್‌ 14 ಬೌಂಡರಿ ಸಹಿತ 65 ರನ್‌ ಚಚ್ಚಿದರು. ಅವರ ಆಟದ ಬಲದಿಂದ ಮುಂಬೈ ಪಡೆ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 207 ಕಲೆಹಾಕಿತು. ಸವಾಲಿನ ಗುರಿ ಬೆನ್ನತ್ತಿದ ಗುಜರಾತ್‌ ಪಡೆ ಕೇವಲ 64 ರನ್‌ ಗಳಿಸಿ ಆಲೌಟ್‌ ಆಯಿತು. ಹೀಗಾಗಿ ಹರ್ಮನ್‌ ಬಳಗ ಬರೋಬ್ಬರಿ 143 ರನ್‌ ಅಂತರದ ಭರ್ಜರಿ ಜಯ ಸಾಧಿಸಿತು.

ADVERTISEMENT

ಗೇಲ್‌, ರೈನಾ ದಾಖಲೆ ಸರಿಗಟ್ಟಿದ ಹರ್ಮನ್
ಮೊನಿಕಾ ಪಟೇಲ್‌ ಎಸೆದ 15ನೇ ಓವರ್‌ ಕೊನೆಯ ನಾಲ್ಕು ಎಸೆತಗಳನ್ನು ಬೌಂಡರಿ ಗೆರೆ ದಾಟಿಸಿದ ಹರ್ಮನ್‌, ಆಸ್ಟ್ರೇಲಿಯಾದ ಆ್ಯಶ್‌ ಗಾರ್ಡನರ್‌ ಹಾಕಿದ ನಂತರದ ಓವರ್‌ನಲ್ಲಿ ಸತತ ಮೂರು ಫೋರ್‌ ಬಾರಿಸಿದರು. ಇದರೊಂದಿಗೆ ಸತತ ಏಳು ಎಸೆತಗಳನ್ನು ಬೌಂಡರಿಗೆ (ಫೋರ್‌/ಸಿಕ್ಸ್) ಅಟ್ಟಿದ ಅವರು ಚುಟುಕು ಕ್ರಿಕೆಟ್‌ನ ದಿಗ್ಗಜ ಬ್ಯಾಟರ್‌ಗಳಾದ ವೆಸ್ಟ್‌ ಇಂಡೀಸ್‌ನ ಕ್ರಿಸ್‌ ಗೇಲ್‌ ಹಾಗೂ ಭಾರತದ ಸುರೇಶ್‌ ರೈನಾ ಅವರ ದಾಖಲೆಯನ್ನು ಸರಿಗಟ್ಟಿದರು.

2011ರ ಐಪಿಎಲ್‌ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ತಂಡದ ಪರ ಆಡಿದ್ದ ಗೇಲ್, ಕೇರಳ ಟಸ್ಕರ್ಸ್‌ ತಂಡದ ಪ್ರಶಾಂತ್‌ ಪರಮೇಶ್ವರನ್‌ ಬೌಲಿಂಗ್‌ನಲ್ಲಿ ಸತತ ಏಳು ಬಾರಿ ಚೆಂಡನ್ನು ಬೌಂಡರಿ ಗೆರೆಯಿಂದಾಚೆಗೆ ಕಳುಹಿಸಿದ್ದರು. 4 ಸಿಕ್ಸರ್‌ ಹಾಗೂ 3 ಫೋರ್‌ ಸಹಿತ 37 ರನ್‌ಗಳು ಈ ಓವರ್‌ನಲ್ಲಿ ಬಂದಿದ್ದವು.

2014ರ ಆವೃತ್ತಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಬಳಗದ ಸುರೇಶ್‌ ರೈನಾ ಇಂಥದೇ ಸಾಧನೆ ಮಾಡಿದ್ದರು. ಅವರು ಪಂಜಾಬ್‌ ಕಿಂಗ್ಸ್‌ ತಂಡದ ಪರ್ವಿಂದರ್‌ ಅವಾನಾ ಬೌಲಿಂಗ್‌ನಲ್ಲಿ ಎರಡು ಸಿಕ್ಸರ್‌ ಹಾಗೂ ಐದು ಫೋರ್‌ ಸಿಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.