ಕೇರಳಕ್ಕೆ ರೋಚಕ ಜಯ
(ಬಿಸಿಸಐ ಚಿತ್ರ)
ಅಹಮದಾಬಾದ್: ರಣಜಿ ಟ್ರೋಫಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇರಳ ಫೈನಲ್‌ಗೆ ಪ್ರವೇಶಿಸಿದೆ.
ಅಹಮದಾಬಾದ್‌ನಲ್ಲಿ ಗುಜರಾತ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯ 'ಡ್ರಾ'ದಲ್ಲಿ ಅಂತ್ಯಗೊಂಡರೂ ಮೊದಲ ಇನಿಂಗ್ಸ್‌ನಲ್ಲಿ ಮಹತ್ವದ ಎರಡು ರನ್ ಅಂತರದ ಮುನ್ನಡೆ ಕಾಯ್ದುಕೊಂಡಿರುವ ಕೇರಳ, 68 ವರ್ಷಗಳ ಬಳಿಕ ದೇಶೀಯ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದೆ.
ಕೇರಳದ 457 ರನ್‌ಗಳಿಗೆ ಉತ್ತರವಾಗಿ ಗುಜರಾತ್ ಒಂದು ಹಂತದಲ್ಲಿ ಮುನ್ನಡೆ ಗಳಿಸಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಕೊನೆಯ ದಿನವಾದ ಇಂದು (ಶುಕ್ರವಾರ) 455 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.
ಅದರಲ್ಲೂ ಕೊನೆಯ ವಿಕೆಟ್ ಕಳೆದುಕೊಂಡಿರುವ ರೀತಿ ನಿಜಕ್ಕೂ ಕ್ರಿಕೆಟ್ ಪ್ರಿಯರಲ್ಲಿ ರೋಮಾಂಚನವನ್ನುಂಟು ಮಾಡಿತು.
ಕೇರಳ ಸ್ಪಿನ್ನರ್ ಆದಿತ್ಯ ಸರ್‌ವಟೆ ದಾಳಿಯಲ್ಲಿ ಗುಜರಾತ್ ಬ್ಯಾಟರ್ ಅರ್ಜಾನ್ ನಾಗ್‌ವಾಸ್‌ವಾಲಾ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಆದರೆ ಚೆಂಡು ನೇರವಾಗಿ ಶಾರ್ಟ್ ಲೆಗ್‌ನಲ್ಲಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ಸಲ್ಮಾನ್ ನಿಜಾರ್ ಅವರ ಹೆಲ್ಮೆಟ್‌ಗೆ ಬಡಿದು ಮೇಲಕ್ಕೆ ಚಿಮ್ಮಿತು. ಕ್ಷಣಾರ್ಧದಲ್ಲಿ ವಿಕೆಟ್ ಕೀಪರ್ ಬಳಿ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನಾಯಕ ಸಚಿನ್ ಬೇಬಿ ಚೆಂಡನ್ನು ಭದ್ರವಾಗಿ ತಮ್ಮ ಕೈಯೊಳಗೆ ಸೇರಿಸಿದರು. ಕೆಲವೇ ಕ್ಷಣದಲ್ಲಿ ಕೇರಳದ ಪಾಳಯದಲ್ಲಿ ಸಂಭ್ರಮ ಮನೆ ಮಾಡಿತು. ಮತ್ತೊಂದೆಡೆ ಗುಜರಾತ್‌ಗೆ ಅದೃಷ್ಟ ಕೈಕೊಟ್ಟಿತು.
ಕೇರಳ ಪೊಲೀಸ್ ಜಾಗೃತಿ ಪೋಸ್ಟ್...
ಇದನ್ನೇ ಉಲ್ಲೇಖ ಮಾಡಿರುವ ಕೇರಳ ಪೊಲೀಸ್, ದ್ವಿಚಕ್ರ ಸವಾರರಲ್ಲಿ ಜಾಗೃತಿಯನ್ನು ಪಸರಿಸುವ ಪ್ರಯತ್ನ ಮಾಡಿದೆ.
ಈ ವಿಡಿಯೊ ಹಂಚಿರುವ ಕೇರಳ ಪೊಲೀಸ್, 'ಆಟ ಅಥವಾ ಜೀವನವಾಗಿರಲಿ, ಹೆಲ್ಮೆಟ್ ರಕ್ಷಣೆ ನೀಡುತ್ತದೆ' ಎಂದು ಪೋಸ್ಟ್ ಹಂಚಿದೆ. 'ಮೈದಾನ ಅಥವಾ ರಸ್ತೆ ಆಗಿರಲಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ' ಎಂದು ಎಚ್ಚರಿಸಿದೆ.
ಈ ಪೋಸ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ವ್ಯಾಪಕ ಪ್ರತಿಕ್ರಿಯೆಗಳು ಬರುತ್ತಿವೆ.
ಈ ಮೊದಲು ಜಮ್ಮು ಮತ್ತು ಕಾಶ್ಮೀರ ವಿರುದ್ಧ ನಡೆದ ಕ್ವಾರ್ಟರ್ ಫೈನಲ್ ಪಂದ್ಯವೂ ಡ್ರಾದಲ್ಲಿ ಅಂತ್ಯಗೊಂಡರೂ ಕೇವಲ ಒಂದು ರನ್ ಮುನ್ನಡೆಯ ಅಂತರದಲ್ಲಿ ಕೇರಳ ಸೆಮಿಫೈನಲ್‌ಗೆ ಪ್ರವೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.