ADVERTISEMENT

ನಾಯಕತ್ವ ತೊರೆಯುವ ಕೊಹ್ಲಿ ನಿರ್ಧಾರ ವೈಯಕ್ತಿಕ, ಬಿಸಿಸಿಐ ಗೌರವಿಸುತ್ತದೆ: ದಾದಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಜನವರಿ 2022, 11:08 IST
Last Updated 16 ಜನವರಿ 2022, 11:08 IST
ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ
ವಿರಾಟ್ ಕೊಹ್ಲಿ ಹಾಗೂ ಸೌರವ್ ಗಂಗೂಲಿ   

ನವದೆಹಲಿ: ಐದು ದಿನಗಳ ಕ್ರಿಕೆಟ್‌ ಆಟದಲ್ಲಿ ಭಾರತ ತಂಡವನ್ನುಹೊಸ ಎತ್ತರಕ್ಕೆ ಕೊಂಡೊಯ್ದಿರುವ ವಿರಾಟ್ ಕೊಹ್ಲಿ, ಹಠಾತ್ ಆಗಿ ಟೀಮ್ ಇಂಡಿಯಾದ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವಕ್ಕೂ ರಾಜೀನಾಮೆ ಸಲ್ಲಿಸಿರುವುದು ಕೇವಲ ದೇಶದಲ್ಲಷ್ಟೇ ಅಲ್ಲದೆ ಜಗತ್ತಿನೆಲ್ಲೆಡೆ ಕ್ರಿಕೆಟ್ ಪ್ರಿಯರಲ್ಲಿ ಅಚ್ಚರಿ ಮೂಡಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ, 'ಅವರ (ವಿರಾಟ್) ನಿರ್ಧಾರವು ವೈಯಕ್ತಿಕವಾಗಿದ್ದು, ಅದನ್ನು ಬಿಸಿಸಿಐ ಅಪಾರವಾಗಿ ಗೌರವಿಸುತ್ತದೆ' ಎಂದು ಹೇಳಿದ್ದಾರೆ.

'ವಿರಾಟ್ ಕೊಹ್ಲಿ ಕಪ್ತಾನಗಿರಿಯಲ್ಲಿ ಭಾರತವು ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಕ್ಷಿಪ್ರ ಪ್ರಗತಿಯನ್ನು ಸಾಧಿಸಿದೆ. ಅವರ ನಿರ್ಧಾರವು ವೈಯಕ್ತಿಕವಾಗಿದ್ದು, ಬಿಸಿಸಿಐ ಅದನ್ನು ಗೌರವಿಸುತ್ತದೆ. ಭವಿಷ್ಯದಲ್ಲೂ ಈ ತಂಡವನ್ನು ಎತ್ತರಕ್ಕೆ ಕೊಂಡೊಯ್ಯಲು ಅವರ ‍ಪಾತ್ರ ಪ್ರಮುಖವಾಗಿರಲಿದೆ. ಅವರೊಬ್ಬ ಶ್ರೇಷ್ಠ ಆಟಗಾರ, ವೆಲ್ ಡನ್' ಎಂದು ಟ್ವೀಟಿಸಿದ್ದಾರೆ.

'ಭಾರತ ಕ್ರಿಕೆಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಅವರ ಕೊಡುಗೆಗಳಿಗಾಗಿ ವೈಯಕ್ತಕಿವಾಗಿ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.

ಕೊಹ್ಲಿ ನಾಯಕತ್ವದಲ್ಲಿ ಭಾರತವು ಆಡಿರುವ 68 ಟೆಸ್ಟ್ ಪಂದ್ಯಗಳ ಪೈಕಿ 40ರಲ್ಲಿ ಗೆಲುವು ದಾಖಲಿಸಿತ್ತು. ಈ ಮೂಲಕ ಭಾರತ ಟೆಸ್ಟ್ ತಂಡದ ಅತಿ ಯಶಸ್ವಿ ನಾಯಕ ಎನಿಸಿಕೊಂಡಿದ್ದರು.

ಕೆಲವು ತಿಂಗಳುಗಳ ಹಿಂದೆಯಷ್ಟೇ ಟ್ವೆಂಟಿ-20 ನಾಯಕತ್ವಕ್ಕೆ ವಿರಾಟ್ ರಾಜೀನಾಮೆ ಸಲ್ಲಿಸಿದ್ದರು. ಬಳಿಕ ಅವರನ್ನು ಏಕದಿನ ತಂಡದ ಕಪ್ತಾನಗಿರಿಯಿಂದ ಬಿಸಿಸಿಐ ಕೆಳಗಿಳಿಸಿತ್ತು. ಈ ಸಂಬಂಧ ವಿರಾಟ್ ಹಾಗೂ ಸೌರವ್ ನೀಡಿರುವ ಭಿನ್ನ ಹೇಳಿಕೆಗಳು ವಿವಾದಕ್ಕೀಡಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.