ಮ್ಯಾಂಚೆಸ್ಟರ್: ಉದ್ದೀಪನ ಮದ್ದು ಸೇವನೆ ಹಾಗೂ ಮ್ಯಾಚ್ ಫಿಕ್ಸಿಂಗ್ ರೀತಿಯಲ್ಲೇ ವರ್ಣಭೇದ ನೀತಿಯನ್ನೂ ಗಂಭೀರ ಅಪರಾಧವನ್ನಾಗಿ ಪರಿಗಣಿಸಬೇಕು ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಜೇಸನ್ ಹೋಲ್ಡರ್ ಅಭಿಪ್ರಾಯಪಟ್ಟಿದ್ದಾರೆ
‘ಡೋಪಿಂಗ್ ಅಥವಾ ಭ್ರಷ್ಟಾಚಾರ ಕೃತ್ಯಗಳಿಗೆ ನೀಡುವ ಪ್ರಮಾಣಕ್ಕಿಂತ ವರ್ಣಭೇದ ನೀತಿಗೆ ನೀಡುವ ಶಿಕ್ಷೆಯ ಪ್ರಮಾಣ ಭಿನ್ನವಾಗಿರಬೇಕು ಎಂದು ನಾನು ಭಾವಿಸುವುದಿಲ್ಲ. ಕ್ರೀಡೆಗಳಲ್ಲಿ ಜನಾಂಗೀಯ ತಾರತಮ್ಯ ಕಂಡುಬಂದರೆ ಸಮಪ್ರಮಾಣದ ಶಿಕ್ಷೆ ವಿಧಿಸಬೇಕು’ ಎಂದು 28 ವರ್ಷದ ಆಲ್‌ರೌಂಡರ್ ಬಿಬಿಸಿ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಆ್ಯಂಡಿಲೆ ಪಿಶುವಾಯೊ ಅವರನ್ನು ಕಳೆದ ವರ್ಷ ಪಾಕಿಸ್ತಾನದ ಆಗಿನ ನಾಯಕ ಸರ್ಫರಾಜ್ ಅಹಮದ್ ಜನಾಂಗೀಯವಾಗಿ ನಿಂದಿಸಿದ್ದರು. ಇದರಿಂದ ಅವರ ಮೇಲೆ ನಾಲ್ಕು ಪಂದ್ಯಗಳ ನಿಷೇಧ ಹೇರಲಾಗಿತ್ತು.
ಇತ್ತೀಚೆಗೆ, ವೆಸ್ಟ್ ಇಂಡೀಸ್ ಮಾಜಿ ನಾಯಕರಾದ ಡ್ಯಾರೆನ್ ಸಾಮಿ ಹಾಗೂ ಕ್ರಿಸ್ ಗೇಲ್ ಅವರು ತಾವು ಜನಾಂಗೀಯ ತಾರತಮ್ಯ ಅನುಭವಿಸಿರುವುದಾಗಿ ತಿಳಿಸಿದ್ದರು. ಅಮೆರಿಕದಲ್ಲಿ ಫ್ಲಾಯ್ಡ್ ಜಾರ್ಜ್ ಸಾವು ಖಂಡಿಸಿ ನಡೆದ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಅಭಿಯಾನಕ್ಕೆ ಬೆಂಬಲವನ್ನೂ ಸೂಚಿಸಿದ್ದರು.
ವರ್ಣಭೇದ ನೀತಿಯ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರೂಪಿಸಿರುವ ನಿಯಮವನ್ನು ಆಟಗಾರನೊಬ್ಬ ಮೂರನೇ ಬಾರಿ ಉಲ್ಲಂಘಿಸಿದರೆ ಆತ ಆಜೀವ ನಿಷೇಧ ಶಿಕ್ಷೆಗೆ ಒಳಪಡಬಹುದು. ಆಟಗಾರ ಮೊದಲ ಬಾರಿ ಈ ತಪ್ಪು ಮಾಡಿದರೆ ನಾಲ್ಕು ಟೆಸ್ಟ್ ಅಥವಾ ಎಂಟು ಸೀಮಿತ ಓವರ್‌ಗಳ ಪಂದ್ಯಗಳ ನಿಷೇಧ ಅನುಭವಿಸಬಹುದು.
‘ನನಗೆ ವೈಯಕ್ತಿಕವಾಗಿ ಜನಾಂಗೀಯ ನಿಂದನೆಯ ಅನುಭವವಾಗಿಲ್ಲ. ಆದರೆ ಈ ಪಿಡುಗಿನ ಬಗ್ಗೆ ನನ್ನ ಸುತ್ತಲೂ ನಡೆದ ಕೆಲವು ಸಂಗತಿಗಳನ್ನು ಗಮನಿಸಿದ್ದೇನೆ. ಇದನ್ನು ನಾವು ಸಹಿಸಿಕೊಂಡಿರಲು ಆಗುವುದಿಲ್ಲ’ ಎಂದು ಹೋಲ್ಡರ್ ಹೇಳಿದ್ದಾರೆ.
ಮುಂದಿನ ತಿಂಗಳು ಮೂರು ಟೆಸ್ಟ್‌ಗಳ ಸರಣಿಯ ಸಂದರ್ಭದಲ್ಲಿ, ವೆಸ್ಟ್ ಇಂಡೀಸ್ ಜೊತೆ ಜಂಟಿಯಾಗಿ ಜನಾಂಗೀಯ ತಾರತಮ್ಯದ ವಿರುದ್ಧ ಪ್ರತಿಭಟನೆ ನಡೆಸುವ ಬಗ್ಗೆ ಇಂಗ್ಲೆಂಡ್ ಪರಿಶೀಲನೆ ನಡೆಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.