ADVERTISEMENT

ಗಾಯಾಳುಗಳ ಪಟ್ಟಿಗೆ ಬೂಮ್ರಾ, ಹನುಮ: ’ಮಿನಿ ಅಸ್ಪತ್ರೆ‘ಯಾದ ಭಾರತ ಕ್ರಿಕೆಟ್ ತಂಡ!

’ಫಿಟ್‌ ಇಂಡಿಯಾ‘ ರಚನೆಯ ಸವಾಲು!

ಪಿಟಿಐ
Published 12 ಜನವರಿ 2021, 19:31 IST
Last Updated 12 ಜನವರಿ 2021, 19:31 IST
ಸಿಡ್ನಿ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಬೆನ್ನುನೋವಿಗೆ ಪ್ರಥಮ ಚಿಕಿತ್ಸೆ ಪಡೆದ ಆರ್. ಅಶ್ವಿನ್ –ಎಎಫ್‌ಪಿ ಚಿತ್ರ
ಸಿಡ್ನಿ ಟೆಸ್ಟ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಬೆನ್ನುನೋವಿಗೆ ಪ್ರಥಮ ಚಿಕಿತ್ಸೆ ಪಡೆದ ಆರ್. ಅಶ್ವಿನ್ –ಎಎಫ್‌ಪಿ ಚಿತ್ರ   

ನವದೆಹಲಿ: ಬಾರ್ಡರ್‌ –ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯಕ್ಕೆ ಫಿಟ್‌ ಇಲೆವನ್ ಬಳಗವನ್ನು ಕಟ್ಟುವ ಸವಾಲು ಈಗ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಮತ್ತು ಕೋಚ್ ರವಿಶಾಸ್ತ್ರಿ ಮುಂದಿದೆ.

ಏಕೆಂದರೆ, ಈಗ ತಂಡದ ಗಾಯಾಳುಗಳ ಪಟ್ಟಿ ಮತ್ತಷ್ಟು ಬೆಳೆದಿದೆ. ಈಗ ಆ ಪಟ್ಟಿಗೆ ವೇಗಿ ಜಸ್‌ಪ್ರೀತ್ ಬೂಮ್ರಾ ಸೇರಿದ್ದಾರೆ. ಅದರಿಂದಾಗಿ ಅವರು ನಾಲ್ಕನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುವುದು ಅನುಮಾನ. ಮೂರನೇ ಟೆಸ್ಟ್‌ನ ಮೂರನೇ ದಿನ ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಅವರ ಹೊಟ್ಟೆಯ ಸ್ನಾಯುಗಳಲ್ಲಿ ನೋವು ಕಾಣಿಸಿಕೊಂಡಿತ್ತು. ನಂತರ ಅವರು ವಿಶ್ರಾಂತಿ ಪಡೆದಿದ್ದರು.

ಈಗಾಗಲೇ ಅನುಭವಿ ಮಧ್ಯಮವೇಗಿಗಳಾದ ಮೊಹಮ್ಮದ್ ಶಮಿ, ಉಮೇಶ್ ಯಾದವ್ ಗಾಯಗೊಂಡು ಹೊರಬಿದ್ದಿದ್ದಾರೆ. ಶಮಿ ಬದಲಿಗೆ ಮೊಹಮದ್ ಸಿರಾಜ್ ಮೆಲ್ಬರ್ನ್‌ನಲ್ಲಿ ಮತ್ತು ಉಮೇಶ್ ಬದಲಿಗೆ ಸಿಡ್ನಿಯಲ್ಲಿ ನವದೀಪ್ ಸೈನಿ ಪದಾರ್ಪಣೆ ಮಾಡಿದ್ದರು. ಬೂಮ್ರಾ ಆಡದಿದ್ದರೆ, ಶಾರ್ದೂಲ್ ಠಾಕೂರ್ ಅಥವಾ ತಂಗರಸು ನಟರಾಜನ್ ಅವರಿಗೆ ಅವಕಾಶ ಸಿಗಬಹುದು. ಆದರೆ ಮೂವರು ಮಧ್ಯಮವೇಗಿಗಳು ಅನುಭವಿಗಳಲ್ಲ ಎನ್ನುವುದು ಗಮನಾರ್ಹ ಸಂಗತಿ.

ADVERTISEMENT

ಗಾಯಾಳುಗಳ ಸಾಲು: ಭಾರತ ತಂಡವು ಈಗ ’ಮಿನಿ ಆಸ್ಪತ್ರೆ‘ಯಂತೆ ಭಾಸವಾಗುತ್ತಿದೆ. ಸೋಮವಾರ ಸಿಡ್ನಿಯಲ್ಲಿ ಮೂರನೇ ಟೆಸ್ಟ್‌ನಲ್ಲಿ ಭಾರತದ ಸೋಲು ತಪ್ಪಿಸಿದ ಆರ್. ಅಶ್ವಿನ್ ಮತ್ತು ಹನುಮವಿಹಾರಿ ಕೂಡ ಗಾಯಗೊಂಡಿದ್ದಾರೆ. ಹನುಮವಿಹಾರಿ ಸ್ನಾಯುಸೆಳೆತದಿಂದಾಗಿ ಮುಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಅವರ ಬದಲಿಗೆ ಮಯಂಕ್ ಅಗರವಾಲ್ ಅವರನ್ನು ಕಣಕ್ಕಿಳಿಸುವ ಯೋಚನೆ ತಂಡಕ್ಕೆ ಇದೆ. ಆದರೆ, ಮಯಂಕ್ ನೆಟ್ಸ್‌ ನಲ್ಲಿ ಅಭ್ಯಾಸ ಮಾಡುವಾಗ ಕೈಗೆ ಚೆಂಡು ಬಡಿದು ಗಾಯವಾಗಿದೆ. ಇನ್ನೂ ಮೂರು ದಿನಗಳಲ್ಲಿ ತಕ್ಕಮಟ್ಟಿಗೆ ಚೇತರಿಸಿಕೊಂಡು ಕಣಕ್ಕಿಳಿಯುವ ಒತ್ತಡ ಮಯಂಕ್ ಮೇಲಿದೆ. ಮೊದಲೆರಡು ಟೆಸ್ಟ್‌ಗಳಲ್ಲಿ ವೈಫಲ್ಯ ಅನುಭವಿಸಿದ್ದ ಅವರನ್ನು ಸಿಡ್ನಿ ಟೆಸ್ಟ್‌ನಲ್ಲಿ ಆಡಿಸಿರಲಿಲ್ಲ.

ಆರ್. ಅಶ್ವಿನ್ ಭಾನುವಾರದಿಂದಲೇ ಬೆನ್ನುನೋವಿನಿಂದ ಬಳಲುತ್ತಿದ್ದಾರೆಂದು ಅವರ ಪತ್ನಿ ಸೋಮವಾರ ಪಂದ್ಯದ ನಂತರ ಟ್ವೀಟ್ ಮಾಡಿದ್ದರು. ಈ ಸರಣಿಯಲ್ಲಿ ಒಟ್ಟು 134 ಓವರ್‌ಗಳನ್ನು ಬೌಲ್ ಮಾಡಿದ್ದಾರೆ.

ಸಿಡ್ನಿ ಅಂಗಳದಲ್ಲಿ ರಿಷಭ್ ಪಂತ್ ಮತ್ತು ಚೇತೇಶ್ವರ್ ಪೂಜಾರ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ಅಶ್ವಿನ್ ಒಂದು ನಿಮಿಷವೂ ಕುರ್ಚಿಯಲ್ಲಿ ಕುಳಿತಿರಲಿಲ್ಲ. ಕಿಟಕಿಯ ಗ್ರಿಲ್ ಮತ್ತು ಬಾಲ್ಕನಿಯ ರೇಲಿಂಗ್‌ ಹಿಡಿದು ನಿಂತಿದ್ದೇ ಹೆಚ್ಚು. ಬೆನ್ನುನೋವಿನಿಂದಾಗಿ ಕುಳಿತುಕೊಳ್ಳಲು ಮತ್ತು ಮಲಗಲು ಅವರು ತೊಂದರೆ ಅನುಭವಿಸಿದ್ದರು. ಆದರೂ ಅದೇ ನೋವಿನಲ್ಲಿ ಬ್ಯಾಟಿಂಗ್‌ ಮಾಡಿದ್ದರು.

15ರಿಂದ ಆರಂಭವಾಗಲಿರುವ ಟೆಸ್ಟ್‌ ಪಂದ್ಯಕ್ಕೂ ಮುನ್ನ ಔಷಧಿ, ಫಿಸಿಯೊಥೆರಪಿ ಪಡೆದು ಕಣಕ್ಕಿಳಿಯುವ ಸಿದ್ಧತೆಯಲ್ಲಿದ್ದಾರೆ. ಸಿಡ್ನಿ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಎಡಗೈ ಹೆಬ್ಬೆರಳು ಮುರಿದುಕೊಂಡಿರುವ ರವೀಂದ್ರ ಜಡೇಜ ಮಂಗಳವಾರ ಶಸ್ತ್ರಚಿಕಿತ್ಸೆಗೊಳಗಾಗಿದ್ದಾರೆ. ಆದ್ದರಿಂದ ಅಶ್ವಿನ್ ಮೇಲೆ ಹೆಚ್ಚಿನ ಹೊಣೆ ಇದೆ.

ರಿಷಭ್ ಪಂತ್ ಮೊದಲ ಇನಿಂಗ್ಸ್‌ನಲ್ಲಿ ಪೆಟ್ಟು ತಿಂದಿದ್ದರೂ, ನೋವು ನಿವಾರಕಗಳನ್ನು ನುಂಗಿ ಎರಡನೇ ಇನಿಂಗ್ಸ್‌ನಲ್ಲಿ ಕಣಕ್ಕಿಳಿದಿದ್ದರು. ಸುಂದರ ಬ್ಯಾಟಿಂಗ್ ಮಾಡಿದ್ದರು. ಶತಕದಂಚಿನಲ್ಲಿ ಔಟಾಗಿದ್ದರು. ಬ್ರಿಸ್ಬೆನ್‌ ಟೆಸ್ಟ್‌ವರೆಗೆ ಅವರು ಸಂಪೂರ್ಣ ಚೇತರಿಸಿಕೊಂಡು ಕಣಕ್ಕಿಳಿಯಬಹುದೆಂಬ ಭರವಸೆ ಇದೆ.

ಭಾರತವು ಆಸ್ಟ್ರೇಲಿಯಾ ಪ್ರವಾಸ ಆರಂಭಿಸುವ ಕೆಲವು ದಿನಗಳ ಮುಂಚೆ ವೇಗಿ ಇಶಾಂತ್ ಶರ್ಮಾ ಗಾಯದ ಕಾರಣ ಹಿಂದೆ ಸರಿದಿದ್ದರು. ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪಯಣಿಸಿದ್ದ ವರುಣ್ ಚಕ್ರವರ್ತಿ ಗಾಯಗೊಂಡು ತವರಿಗೆ ಮರಳಿದ್ದರು. ಈಚೆಗೆ ಕೆ.ಎಲ್. ರಾಹುಲ್ ಕೂಡ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.