ADVERTISEMENT

'ನಾನು ಕೂಡಾ ಬ್ರಾಹ್ಮಣ' – ರೈನಾ ಹೇಳಿಕೆಗೆ ಅಭಿಮಾನಿಗಳ ಆಕ್ರೋಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜುಲೈ 2021, 5:16 IST
Last Updated 21 ಜುಲೈ 2021, 5:16 IST
ಸುರೇಶ್ ರೈನಾ
ಸುರೇಶ್ ರೈನಾ   

ಚೆನ್ನೈ: ತಮಿಳುನಾಡು ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಸಂದರ್ಭದಲ್ಲಿ ಕಾಮೆಂಟರಿ ಪ್ಯಾನೆಲ್‌ನಲ್ಲಿ ವಿಶೇಷ ಆತಿಥಿಯಾಗಿ ಭಾಗವಹಿಸಿರುವ ಭಾರತದ ಮಾಜಿ ಆಲ್‌ರೌಂಡರ್ ಸುರೇಶ್ ರೈನಾ, 'ನಾನು ಕೂಡಾ ಬ್ರಾಹ್ಮಣ' ಎಂದು ಮಾತಿನ ನಡುವೆ ಸುಳಿದ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ

ಐಪಿಎಲ್‌ನಲ್ಲಿ ಕಳೆದ ಅನೇಕ ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ರೈನಾ ಅವರು ತಮಿಳುನಾಡಿನ ಸಂಸ್ಕೃತಿಗೆ ಹೇಗೆ ಹೊಂದಿಕೊಂಡಿದ್ದಾರೆ ಎಂಬ ವೀಕ್ಷಕ ವಿವರಣೆಗಾರನ ಪ್ರಶ್ನೆಗೆ ಉತ್ತರವಾಗಿ 'ನಾನು ಕೂಡಾ ಬ್ರಾಹ್ಮಣ' ಎಂಬ ಹೇಳಿಕೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿದಾಡಿದೆ.

'ನಾನು ಕೂಡಾ ಬ್ರಾಹ್ಮಣನಾಗಿದ್ದೇನೆ. 2004ರಿಂದ ಚೆನ್ನೈನಲ್ಲಿ ಆಡುತ್ತಿದ್ದೇನೆ. ಇಲ್ಲಿನ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ. ನನ್ನ ಸಹ ಆಟಗಾರರನ್ನು ಪ್ರೀತಿಸುತ್ತೇನೆ. ನಾನು ಅನಿರುದ್ಧ ಶ್ರೀಕಾಂತ್, ಬದ್ರಿ (ಸುಬ್ರಮಣ್ಯಂ ಬದ್ರಿನಾಥ್), ಬಾಲಾ ಭಾಯ್ (ಎಲ್. ಬಾಲಾಜಿ) ಅವರೊಂದಿಗೆ ಆಡಿದ್ದೇನೆ. ಅವರಿಂದ ನೀವು ಏನಾದರೂ ಒಳ್ಳೆಯದನ್ನು ಕಲಿಯಬೇಕು ಎಂದು ನಾನು ಭಾವಿಸುತ್ತೇನೆ. ನಮಗೆ ಇಲ್ಲಿ ಉತ್ತಮ ಆಡಳಿತವಿದೆ. ನಾನು ಚೆನ್ನೈ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ಸಿಎಸ್‌ಕೆ ಭಾಗವಾಗಲು ಸಾಧ್ಯವಾಗಿರುವುದು ನನ್ನ ಅದೃಷ್ಟ. ಇಲ್ಲಿ ಮತ್ತಷ್ಟು ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ' ಎಂದಿದ್ದಾರೆ.

ತಮ್ಮ ಆಡುವ ಕಾಲಘಟ್ಟದಲ್ಲಿ ಮೈದಾನದ ಒಳಗೂ ಹೊರಗೂ ಸಭ್ಯ ನಡವಳಿಕೆಯಿಂದ ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿರುವ ರೈನಾ ಅವರಿಂದ ಇಂತಹದೊಂದು ಹೇಳಿಕೆಯು ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. 'ತಮಿಳುನಾಡು ಸಂಸ್ಕೃತಿಗೂ, ಬ್ರಾಹ್ಮಣ ಆಗಿರುವುದಕ್ಕೂ ಏನಯ್ಯಾ ಸಂಬಂಧ' ಎಂದು ಕೆಲವರು ತಲೆ ಚಚ್ಚಿಕೊಂಡರೆ, ಇನ್ನೂ ಕೆಲವರು ಟೀಕೆಗಳ ಮಳೆ ಸುರಿಸಿದ್ದಾರೆ.

ಮೂಲತಃ ಉತ್ತರ ಪ್ರದೇಶದವರಾಗಿರುವ 34 ವರ್ಷದ ಸುರೇಶ್ ರೈನಾ, 2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.