ADVERTISEMENT

ಶಿಖರ್–ರಾಹುಲ್ ಇಬ್ಬರಿಗೂ ಅವಕಾಶ ನೀಡಲು 3ನೇ ಕ್ರಮಾಂಕ ಬಿಟ್ಟುಕೊಡಲಿದ್ದಾರೆ ವಿರಾಟ್

ಭಾರತ–ಆಸ್ಟ್ರೇಲಿಯಾ ಏಕದಿನ ಸರಣಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 11:43 IST
Last Updated 13 ಜನವರಿ 2020, 11:43 IST
   

ಮುಂಬೈ:ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್‌ ಧವನ್‌ ಹಾಗೂ ಕೆ.ಎಲ್‌.ರಾಹುಲ್‌ ಇಬ್ಬರಿಗೂ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಅದಕ್ಕಾಗಿ ನಾಲ್ಕನೇ ಕ್ರಮಾಂಕದಿಂದ ಹಿಂಬಡ್ತಿ ಪಡೆಯಲು ಸಿದ್ಧ ಎಂದು ನಾಯಕ ವಿರಾಟ್‌ ಕೊಹ್ಲಿ ಹೇಳಿಕೊಂಡಿದ್ದಾರೆ.

ಗಾಯಗೊಂಡು ವಿಶ್ರಾಂತಿಯಲ್ಲಿದ್ದ ಧವನ್‌ಇತ್ತೀಚೆಗೆ ಮುಕ್ತಾಯವಾದ ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಉತ್ತಮವಾಗಿ ಆಡಿದ್ದರು. ಧವನ್‌ ಬದಲು ಉಪನಾಯಕ ರೋಹಿತ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಲು ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದ ರಾಹುಲ್‌ ವೆಸ್ಟ್‌ ಇಂಡೀಸ್‌, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಗಮನ ಸೆಳೆದಿದ್ದರು.

ಶ್ರೀಲಂಕಾ ಟಿ20 ಸರಣಿಯಿಂದ ಬಿಡುವ ಪಡೆದಿದ್ದ ರೋಹಿತ್‌ ಆಸ್ಟ್ರೇಲಿಯಾ ಸರಣಿಗೆ ಲಭ್ಯರಿದ್ದಾರೆ. ಹಿಗಾಗಿ ಆಸಿಸ್‌ ವಿರುದ್ಧದಸರಣಿಯಲ್ಲಿ ರೋಹಿತ್‌ ಜೊತೆಗೆ ಇನಿಂಗ್ಸ್ ಆರಂಭಿಸುವ ಅವಕಾಶ ಯಾರಿಗೆ ಸಿಗಲಿದೆ? ಕನ್ನಡಿಗ ರಾಹುಲ್‌ ಹಾಗೂ ಧವನ್‌ ಇಬ್ಬರಲ್ಲಿ ಯಾರನ್ನು ಕೈಬಿಡಲಾಗುತ್ತದೆ ಎಂಬ ಚರ್ಚೆ ನಡೆಯುತ್ತಿದೆ. ಹೀಗಿರುವಾಗ ಇಬ್ಬರಿಗೂ ಅವಕಾಶ ನೀಡುವ ಕುರಿತು ಕೊಹ್ಲಿ ಹೇಳಿಕೆ ನೀಡಿದ್ದಾರೆ.

ADVERTISEMENT

‘ನೋಡಿ, ಉತ್ತಮ ಲಯದಲ್ಲಿರುವ ಆಟಗಾರರು ತಂಡದಲ್ಲಿರುವುದುಯಾವಾಗಲೂ ಒಳ್ಳೆಯದು. ಸಮರ್ಥ ಆಟಗಾರರು ತಂಡದಲ್ಲಿರುವುದನ್ನೂ ನೀವು ಖಂಡಿತಾ ಬಯಸುತ್ತೀರಿ. ಹೀಗಾಗಿ ಮೂವರೂ (ರೋಹಿತ್‌, ರಾಹುಲ್‌, ಧವನ್‌) ಆಡುವ ಸಾಧ್ಯತೆ ಇದೆ. ನಾವು ಯಾವ ರೀತಿಯ ಸಮತೋಲವನ್ನುಬಯಸಿದ್ದೇವೆಯೋ ಅದನ್ನು ಅಂಗಳದಲ್ಲಿ ಕಾಣುವ ಕುತೂಹಲವಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಹಾಗಾದರೆ ಆ ಮೂವರುಅಗ್ರ ಕ್ರಮಾಂಕದಲ್ಲಿ ಆಡಿದರೆ ನೀವು ಕೆಳಕ್ರಮಾಂಕದಲ್ಲಿ ಆಡುವಿರಾ?’ ಎಂದು ಕೇಳಿದ ಪ್ರಶ್ನೆಗೆ, ‘ಹೌದು.ಸಾಧ್ಯತೆ ದಟ್ಟವಾಗಿದೆ. ಅದನ್ನು ಸಂತಸದಿಂದ ನಿರ್ವಹಿಸುತ್ತೇನೆ. ನೋಡಿ ನಾನು ನನ್ನ ಕ್ರಮಾಂಕಕ್ಕೆ ಅಂಟಿಕೊಂಡಿಲ್ಲ. ನಾನು ಯಾವ ಕ್ರಮಾಂಕದಲ್ಲಿ ಆಡುತ್ತೇನೆ ಎಂಬುದರ ಬಗ್ಗೆ ಆತಂಕವನ್ನೂ ಹೊಂದಿಲ್ಲ’ ಎಂದು ಉತ್ತರಿಸಿದ್ದಾರೆ.

‘ಮುಂದಿನ ಸಾಕಷ್ಟು ಸವಾಲುಗಳಿಗೆ ಸಿದ್ಧತೆ ನಡೆಸಿಕೊಳ್ಳುವುದು ನಾಯಕನಾಗಿ ನನ್ನ ಕರ್ತವ್ಯ. ಹೆಚ್ಚಿನವರು ಈ ಬಗ್ಗೆ ಯೋಚಿಸದೆ ಇರಬಹುದು. ಆದರೆ, ಒಬ್ಬ ನಾಯಕನಾಗಿ ನೀವು ಸದ್ಯದ ನಿಮ್ಮ ತಂಡವನ್ನು ನೋಡಿಕೊಳ್ಳುವುದಲ್ಲ. ಬದಲಾಗಿ ನೀವು ಹಿಂದೆ ಸರಿಯುವಾಗ ಅದನ್ನು ಮತ್ತೊಬ್ಬರಿಗೆ ಬಿಟ್ಟುಕೊಡುವುದಕ್ಕೂಸಜ್ಚುಗೊಳಿಸಬೇಕಿದೆ’ ಎಂದು ತಿಳಿಸಿದ್ದಾರೆ.

ನಾಳೆ ಇಲ್ಲಿನ ವಾಂಖೆಡೆ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ.ಎರಡನೇ ಪಂದ್ಯ ರಾಜ್‌ಕೋಟ್‌ನಲ್ಲಿ (ಜ.17) ಮತ್ತು ಮೂರನೇ ಪಂದ್ಯ ಬೆಂಗಳೂರಿನಲ್ಲಿ (ಜ.19) ನಡೆಯಲಿದೆ. ಕಳೆದ ವರ್ಷ ಭಾರತದಲ್ಲಿಯೇ ನಡೆದಿದ್ದ ಐದು ಪಂದ್ಯಗಳ ಸರಣಿಯನ್ನು ಆಸಿಸ್‌ 3–2ರಿಂದ ಗೆದ್ದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.