ADVERTISEMENT

ಟಿ20 ವಿಶ್ವಕಪ್‌ ತಂಡದಲ್ಲಿಲ್ಲ ಚಾಹಲ್, ಆದರೂ ಆರ್‌ಸಿಬಿ ಪರ ಮಿಂಚುವ ಗುರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಸೆಪ್ಟೆಂಬರ್ 2021, 8:00 IST
Last Updated 16 ಸೆಪ್ಟೆಂಬರ್ 2021, 8:00 IST
ಯಜುವೇಂದ್ರ ಚಾಹಲ್
ಯಜುವೇಂದ್ರ ಚಾಹಲ್    

ದುಬೈ: ಮುಂಬರುವ ಟ್ವೆಂಟಿ-20 ವಿಶ್ವಕಪ್ ಭಾರತ ತಂಡದಿಂದ ರಿಸ್ಟ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರನ್ನು ಕೈಬಿಡಲಾಗಿದೆ. ಆದರೆ ವಿಶ್ವಕಪ್‌ಗೂ ಮುನ್ನ ಯುಎಇನಲ್ಲೇ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ.

'ನಾನು ಉತ್ಸಾಹಿತನಾಗಿದ್ದೇನೆ. ವಿಶೇಷವಾಗಿಯೂ ಅಂಕಪಟ್ಟಿಯಲ್ಲಿ ನಾವು (ಆರ್‌ಸಿಬಿ) ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, ಇದೇ ರೀತಿಯ ಪ್ರದರ್ಶನ ಮುಂದುವರಿಸಿದರೆ ಉತ್ತಮ ಅವಕಾಶವಿದೆ. ನಿಸ್ಸಂಶಯವಾಗಿಯೂ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದಾಗ ಉತ್ತಮ ಭಾವನೆ ಮೂಡುತ್ತದೆ. 'ಯುಝಿ ಈಸ್ ಬ್ಯಾಕ್' (ಹಳೆಯ ಯುಝಿ ಮರಳಿದ್ದಾರೆ) ಎಂದು ಹೇಳಬಲ್ಲೆ' ಎಂದಿದ್ದಾರೆ.

ಆಟಗಾರರಲ್ಲಿ ಕೋವಿಡ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಮೇ ತಿಂಗಳಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಟೂರ್ನಿಯ ದ್ವಿತೀಯಾರ್ಧದ ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ.

ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡುವ ಮೂಲಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುವುದು ಚಾಹಲ್ ಗುರಿಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿರುವ ಚಾಹಲ್, ಪ್ರಸಕ್ತ ಸಾಲಿನಲ್ಲಿ ಆಡಿರುವ ಏಳು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನಷ್ಟೇ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಏತನ್ಮಧ್ಯೆ ಅಭ್ಯಾಸ ಪಂದ್ಯದಲ್ಲಿ ಎಬಿ ಡಿ ವಿಲಿಯರ್ಸ್ ಅಮೋಘ ಶತಕ ಬಾರಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಅತ್ಯುತ್ತಮ ಫಾರ್ಮ್ ಮುಂದುವರಿಸುವ ಸೂಚನೆ ನೀಡಿದ್ದಾರೆ.

ಆರ್‌ಸಿಬಿ ತಂಡವು ಇದುವರೆಗೆ ಆಡಿರುವ ಏಳು ಪಂದ್ಯಗಳಲ್ಲಿ ಐದು ಗೆಲುವು ಹಾಗೂ ಎರಡು ಸೋಲಿನೊಂದಿಗೆ ಒಟ್ಟು 10 ಅಂಕಗಳನ್ನು ಸಂಪಾದಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.