ADVERTISEMENT

ಸಿಎಸ್‌ಕೆಗೆ ಮತ್ತೊಂದು ಹಿನ್ನಡೆ: ಈ ಬಾರಿ ಐಪಿಎಲ್‌ ಆಡುವುದಿಲ್ಲ ಎಂದ ಹರಭಜನ್

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 14:30 IST
Last Updated 4 ಸೆಪ್ಟೆಂಬರ್ 2020, 14:30 IST
   

ನವದೆಹಲಿ : ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಹರಭಜನ್ ಸಿಂಗ್ ಅವರು ಈ ಬಾರಿಯ ಐಪಿಎಲ್‌ನಲ್ಲಿ ಆಡುವುದಿಲ್ಲವೆಂದು ತಿಳಿಸಿದ್ದಾರೆ.

‘ವೈಯಕ್ತಿಕ ಕಾರಣಗಳಿಗಾಗಿ ನಾನು ಐಪಿಎಲ್‌ನಲ್ಲಿ ಆಡುತ್ತಿಲ್ಲ. ಈ ಕುರಿತು ತಂಡದ ಆಡಳಿತಕ್ಕೆ ತಿಳಿಸಿದ್ದೇನೆ. ನನ್ನ ಖಾಸಗಿತನವನ್ನು ಎಲ್ಲರೂ ಗೌರವಿಸುವರೆಂಬ ನಂಬಿಕೆ ಇದೆ’ ಎಂದು 40 ವರ್ಷದ ಹರಭಜನ್ ಶುಕ್ರವಾರ ಹೇಳಿದ್ದಾರೆ.

ಸಿಎಸ್‌ಕೆ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಹರಭಜನ್‌ ಸದ್ಯ ಪಂಜಾಬ್‌ನ ಜಲಂಧರ್‌ನಲ್ಲಿದ್ದಾರೆ. ಕಳೆದ ಎರಡು ಆವೃತ್ತಿಗಳಲ್ಲಿ ಅವರು ಸಿಎಸ್‌ಕೆ ತಂಡದಲ್ಲಿ ಆಡಿದ್ದರು.‌

ADVERTISEMENT

‘ನನ್ನ ನಿರ್ಧಾರಕ್ಕೆ ಸಿಎಸ್‌ಕೆ ಆಡಳಿತವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಅದಕ್ಕಾಗಿ ಅವರಿಗೆ ಕೃತಜ್ಞತೆಗಳು’ ಎಂದೂ ಆಫ್‌ಸ್ಪಿನ್ನರ್ ಹರಭಜನ್ ಹೇಳಿದ್ದಾರೆ.

‘ಕೆಲವೊಮ್ಮ ನಮ್ಮೆಲ್ಲವನ್ನೂ ಬಿಟ್ಟು ಕುಟುಂಬದೊಂದಿಗೆ ಇರುವುದು ಅನಿವಾರ್ಯವಾಗುತ್ತದೆ. ಮಗಳು ಮತ್ತು ಪತ್ನಿಗೆ ನನ್ನ ಅಗತ್ಯ ಹೆಚ್ಚಿದೆ. ಆದರೆ ನನ್ನ ಮನಸ್ಸು ಮಾತ್ರ ಯುಎಇಯಲ್ಲಿ ಆಡಲಿರುವ ನನ್ನ ತಂಡದತ್ತಲೇ ಇರುತ್ತದೆ’ ಎಂದು ಹರಭಜನ್ ಹೇಳಿದ್ದಾರೆ.

ಚೆನ್ನೈ ತಂಡದಲ್ಲಿ 13 ಮಂದಿಗೆ ಕೋವಿಡ್–19 ಸೋಂಕು ತಗುಲಿರುವುದು ವರದಿಯಾಗಿರುವುದರಿಂದ ಹರಭಜನ್ ಈ ನಿರ್ಧಾರ ಕೈಗೊಂಡಿದ್ದಾರೆಂಬ ಮಾತುಗಳೂ ಕೇಳಿಬಂದಿದ್ದವು.

‘ಕೋವಿಡ್‌ಗೂ ಹರಭಜನ್‌ ನಿರ್ಧಾರಕ್ಕೂ ಸಂಬಂಧವಿಲ್ಲ. ಪತ್ನಿ ಮತ್ತು ಮೂರು ವರ್ಷದ ಮಗಳನ್ನು ಸುಮಾರು ಮೂರು ತಿಂಗಳು ಬಿಟ್ಟು ವಿದೇಶದಲ್ಲಿರುವುದು ಕಷ್ಟದ ಕೆಲಸ. ಅದರಿಂದಾಗಿ ಉಂಟಾಗುವ ಒತ್ತಡದಿಂದ ಆಟದ ಮೇಲೆ ಹೆಚ್ಚು ಏಕಾಗ್ರತೆ ಸಾಧಿಸಲು ಸಾಧ್ಯವಾಗದು. ಕುಟುಂಬದ ಸಲುವಾಗಿ ಹರಭಜನ್ ಎರಡು ಕೋಟಿ ಅಲ್ಲ 20 ಕೋಟಿಯನ್ನಾದರೂ ಬಿಡುತ್ತಾರೆ’ ಎಂದು ಅವರ ಸ್ನೇಹಿತರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

‘ಹರಭಜನ್ ಈ ಸಲ ಐಪಿಎಲ್‌ನಲ್ಲಿ ಆಡದಿರುವ ಕುರಿತು ನಮಗೆ ತಿಳಿಸಿದ್ದಾರೆ. ಅವರ ನಿರ್ಣಯವನ್ನು ನಾವು ಗೌರವಿಸುತ್ತೇವೆ. ಅವರು ಮತ್ತು ಅವರ ಕುಟುಂಬದೊಂದಿಗೆ ನಾವಿದ್ದೇವೆ’ ಎಂದು ತಂಡದ ಸಿಇಒ ಕೆ.ಎಸ್. ವಿಶ್ವನಾಥನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿ ಅತ್ಯಂತ ಅನುಭವಿ ಆಟಗಾರರಲ್ಲಿ ಹರಭಜನ್ ಕೂಡ ಒಬ್ಬರು. ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಗಳಿಸಿರುವ (150) ಮೂರನೇ ಬೌಲರ್ ಎಂಬ ಹೆಗ್ಗಳಿಕೆ ಅವರದ್ದು. ಶ್ರೀಲಂಕಾದ ಲಸಿತ್ ಮಾಲಿಂಗ್ (170) ಮತ್ತು ಲೆಗ್‌ಸ್ಪಿನ್ನರ್ ಅಮಿತ್ ಮಿಶ್ರಾ (157) ಕ್ರಮವಾಗಿ ಮೊದಲ ಎರಡು ಸ್ಥಾನಗಳಲ್ಲಿದ್ದಾರೆ.

ಈಚೆಗೆ ಚೆನ್ನೈ ತಂಡದ ಆಟಗಾರ ಸುರೇಶ್ ರೈನಾ ಕೂಡ ವೈಯಕ್ತಿಕ ಕಾರಣಗಳಿಗಾಗಿ ಭಾರತಕ್ಕೆ ಮರಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.