ADVERTISEMENT

ENG vs IND Test | ವೈಫಲ್ಯದ ಸಂಪೂರ್ಣ ಹೊಣೆ ನನ್ನದೇ: ಪ್ರಸಿದ್ಧ ಕೃಷ್ಣ

ಪಿಟಿಐ
Published 28 ಜೂನ್ 2025, 14:41 IST
Last Updated 28 ಜೂನ್ 2025, 14:41 IST
<div class="paragraphs"><p>ಇಂಗ್ಲೆಂಡ್‌ ತಂಡದ ಬ್ಯಾಟರ್‌ಗಳು ರನ್‌ಗಾಗಿ ಓಡುತ್ತಿದ್ದಾಗ ಪ್ರಸಿದ್ಧ ಕೃಷ್ಣ ಕಂಡುಬಂದದ್ದು ಹೀಗೆ</p></div>

ಇಂಗ್ಲೆಂಡ್‌ ತಂಡದ ಬ್ಯಾಟರ್‌ಗಳು ರನ್‌ಗಾಗಿ ಓಡುತ್ತಿದ್ದಾಗ ಪ್ರಸಿದ್ಧ ಕೃಷ್ಣ ಕಂಡುಬಂದದ್ದು ಹೀಗೆ

   

ರಾಯಿಟರ್ಸ್‌ ಚಿತ್ರ

ಬರ್ಮಿಂಗ್‌ಹ್ಯಾಮ್‌: ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಹೆಚ್ಚು ರನ್‌ ಬಿಟ್ಟುಕೊಟ್ಟಿದ್ದ ಭಾರತದ ವೇಗಿ ಪ್ರಸಿದ್ಧ ಕೃಷ್ಣ, ವೈಫಲ್ಯದ ಸಂಪೂರ್ಣ ಹೊಣೆಯನ್ನು ತಾವೇ ಹೊರುವುದಾಗಿ ಹೇಳಿದ್ದಾರೆ.

ADVERTISEMENT

ಲೀಡ್ಸ್‌ನಲ್ಲಿ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 20 ಓವರ್‌ ಬೌಲಿಂಗ್ ಮಾಡಿದ್ದ ಪ್ರಸಿದ್ಧ, 6.40 ದರದಲ್ಲಿ 128 ರನ್‌ ಬಿಟ್ಟುಕೊಟ್ಟು ಮೂರು ವಿಕೆಟ್‌ ಪಡೆದಿದ್ದರು. ಎರಡನೇ ಇನಿಂಗ್ಸ್‌ನಲ್ಲೂ ದುಬಾರಿಯಾಗಿದ್ದ ಅವರು 15 ಓವರ್‌ಗಳಲ್ಲಿ 2 ವಿಕೆಟ್‌ ಪಡೆದು 92 ರನ್‌ ಬಿಟ್ಟುಕೊಟ್ಟಿದ್ದರು. ಹೀಗಾಗಿ, ಪ್ರಸಿದ್ಧ ಪ್ರದರ್ಶನದ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.

ಈ ಪಂದ್ಯವನ್ನು ಐದು ವಿಕೆಟ್‌ ಅಂತರದಿಂದ ಗೆದ್ದುಕೊಂಡಿರುವ ಇಂಗ್ಲೆಂಡ್‌ ತಂಡ, ಸರಣಿಯಲ್ಲಿ 1–0 ಅಂತರದ ಮುನ್ನಡೆ ಸಾಧಿಸಿದೆ.

ತಮ್ಮ ಪ್ರದರ್ಶನದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಪ್ರಸಿದ್ಧ, 'ಮೊದಲ ಇನಿಂಗ್ಸ್‌ನಲ್ಲಿ ನಾನು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚು ಶಾರ್ಟ್‌ ಎಸೆತಗಳನ್ನು ಪ್ರಯೋಗಿಸಿದೆ. ಎರಡನೇ ಇನಿಂಗ್ಸ್‌ನಲ್ಲಿ ಸ್ವಲ್ಪ ಸುಧಾರಿಸಿದ್ದೆ. ವಿಕೆಟ್‌ ಸ್ವಲ್ಪ ನಿಧಾನಗತಿಯಲ್ಲಿತ್ತು. ನಾನು ಬಯಸಿದ ಲೆಂಗ್ತ್‌ನಲ್ಲಿ ಬೌಲಿಂಗ್‌ ಮಾಡಲಾಗಲಿಲ್ಲ. ಆದರೆ ನೆಪ ಹೇಳುವುದಿಲ್ಲ. ವೃತ್ತಿಪರನಾಗಿ ನಾನು ಉತ್ತಮವಾಗಿ ಬೌಲಿಂಗ್ ಮಾಡಬೇಕಿತ್ತು. ವೈಫಲ್ಯವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುವೆ. ಮುಂದಿನ ಸಲ ಉತ್ತಮವಾಗಿ ಬೌಲಿಂಗ್‌ ಮಾಡುವೆ' ಎಂದು ಹೇಳಿದ್ದಾರೆ.

'ಪ್ರತಿ ಬಾರಿ ಬೌಲಿಂಗ್‌ಗೆ ಇಳಿಯುವಾಗ ಮೇಡನ್‌ ಮಾಡಬೇಕೆಂದು ಮನಸ್ಸಿನಲ್ಲಿರುತಿತ್ತು. ಆದರೆ ಔಟ್‌ಫೀಲ್ಡ್‌ ವೇಗವಾಗಿತ್ತು. ನನ್ನ ಬೌಲಿಂಗ್ ಪರಿಪೂರ್ಣವಾಗಿರಲಿಲ್ಲ. ಕೆಲವು ಎಜ್‌ಗಳು ಬೌಂಡರಿಯಾದವು. ನಂತರ ಬ್ಯಾಟರ್‌ಗಳು ನನ್ನನ್ನು ಗುರಿಯಾಗಿಸಿದರು' ಎಂದು ಒಪ್ಪಿಕೊಂಡಿದ್ದಾರೆ.

ಕೆಳಕ್ರಮಾಂಕದ ಬ್ಯಾಟರ್‌ಗಳ ತಾಲೀಮು
ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತದ ಕೆಳ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾಗಿದ್ದು ಎದ್ದುಕಂಡಿತ್ತು. ‘ಕೆಳಕ್ರಮಾಂಕದ ಬ್ಯಾಟರ್‌ಗಳಾಗಿ ನಾವು ಹೆಚ್ಚು ಅಭ್ಯಾಸ ನಡೆಸುತ್ತಿದ್ದೇವೆ. ನಮ್ಮ ನೆಟ್‌ ಸೆಷನ್‌ನಲ್ಲಿ ಇದನ್ನು ಗಮನಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.