ಶುಭಮನ್ ಗಿಲ್
(ಪಿಟಿಐ ಚಿತ್ರ)
ದುಬೈ: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) '2025 ಜುಲೈ ತಿಂಗಳ ಆಟಗಾರ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ಆ ಮೂಲಕ ಪುರುಷರ ಕ್ರಿಕೆಟ್‌ನಲ್ಲಿ ದಾಖಲೆಯ ನಾಲ್ಕನೇ ಸಲ ಐಸಿಸಿ ತಿಂಗಳ ಪ್ರಶಸ್ತಿ ಗೆದ್ದ ಆಟಗಾರ ಎನಿಸಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಅಂತ್ಯಗೊಂಡ ಆ್ಯಂಡರ್ಸನ್-ತೆಂಡೂಲ್ಕರ್ ಟ್ರೋಫಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಗಿಲ್, ಜುಲೈ ತಿಂಗಳ ಅವಧಿಯಲ್ಲಿ ಆಡಿದ ಮೂರು ಪಂದ್ಯಗಳಲ್ಲಿ 94.50ರ ಸರಾಸರಿಯಲ್ಲಿ 567 ರನ್ ಕಲೆ ಹಾಕಿದ್ದರು. ಅಲ್ಲದೆ ಆರು ಇನಿಂಗ್ಸ್‌ಗಳಲ್ಲಿ ಒಂದು ದ್ವಿಶತಕ ಹಾಗೂ ಎರಡು ಶತಕಗಳನ್ನು ಬಾರಿಸಿದ್ದರು.
25 ವರ್ಷದ ಗಿಲ್ ಅವರಿಗೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹಾಗೂ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವಿಯಾನ್ ಮುಲ್ಡರ್ ಅವರಿಂದ ಕಠಿಣ ಪೈಪೋಟಿ ಏರ್ಪಟಿತ್ತು.
ನಾಯಕತ್ವ ವಹಿಸಿದ ತಮ್ಮ ಮೊದಲ ಪ್ರವಾಸದಲ್ಲೇ ಗಿಲ್ ಯಶಸ್ಸನ್ನು ಕಂಡಿದ್ದರು. 'ಪ್ರಶಸ್ತಿಗೆ ಅರ್ಹವಾಗಿರುವುದು ತುಂಬಾನೇ ಸಂತಸಕ್ಕೆ ಕಾರಣವಾಗಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಗಳಿಸಿದ ದ್ವಿಶತಕವನ್ನು ಜೀವನ ಪರ್ಯಂತ ನೆನಪಿನಲ್ಲಿಕೊಟ್ಟುಕೊಳ್ಳುತ್ತೇನೆ' ಎಂದಿದ್ದಾರೆ.
'ನಾಯಕನಾಗಿ ಇಂಗ್ಲೆಂಡ್ ಸರಣಿಯು ನನ್ನ ಪಾಲಿಗೆ ಕಲಿಕಾ ಘಟ್ಟವಾಗಿತ್ತು. ಇತ್ತಂಡಗಳು ಕೆಲವು ಅದ್ಭುತ ಪ್ರದರ್ಶನಗಳನ್ನು ನೀಡಿದವು. ಎರಡೂ ತಂಡಗಳ ಆಟಗಾರರು ಇದನ್ನು ದೀರ್ಘಕಾಲದ ವರೆಗೆ ನೆನಪಿನಲ್ಲಿಟ್ಟುಕೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ' ಎಂದು ತಿಳಿಸಿದ್ದಾರೆ.
ನಾಲ್ಕನೇ ಸಲ ಐಸಿಸಿ ತಿಂಗಳ ಪ್ರಶಸ್ತಿ ಗೆದ್ದ ಗಿಲ್...
ಒಟ್ಟಾರೆಯಾಗಿ ತಮ್ಮ ವೃತ್ತಿ ಜೀವನದಲ್ಲಿ ನಾಲ್ಕನೇ ಸಲ ಗಿಲ್, ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಆ ಮೂಲಕ ಪುರುಷರ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲೇ ಫೆಬ್ರುವರಿ ತಿಂಗಳಲ್ಲಿ ಮತ್ತು 2023ರ ಜನವರಿ ಹಾಗೂ ಸೆಪ್ಟೆಂಬರ್ ತಿಂಗಳಲ್ಲೂ ಐಸಿಸಿ ತಿಂಗಳ ಪ್ರಶಸ್ತಿಗೆ ಗಿಲ್ ಭಾಜನರಾಗಿದ್ದರು.
ಒಟ್ಟಾರೆಯಾಗಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಗಿಲ್ 75.40ರ ಸರಾಸರಿಯಲ್ಲಿ 754 ರನ್ ಪೇರಿಸಿದ್ದರು. ಅಲ್ಲದೆ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಸರಣಿಯಲ್ಲಿ ಭಾರತ 2-2ರ ಸಮಬಲ ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.