ADVERTISEMENT

ಮಹಿಳಾ ಕ್ರಿಕೆಟ್ | ದೀಪ್ತಿ ಆಲ್‌ರೌಂಡ್ ಆಟ; ವಿಂಡೀಸ್ ಎದುರು ಭಾರತ ಕ್ಲೀನ್ ಸ್ವೀಪ್

ಪಿಟಿಐ
Published 27 ಡಿಸೆಂಬರ್ 2024, 9:53 IST
Last Updated 27 ಡಿಸೆಂಬರ್ 2024, 9:53 IST
<div class="paragraphs"><p>ಜೆಮಿಮಾ ರಾಡ್ರಿಗಸ್‌&nbsp;ಹಾಗೂ  ದೀಪ್ತಿ ಶರ್ಮಾ</p></div>

ಜೆಮಿಮಾ ರಾಡ್ರಿಗಸ್‌ ಹಾಗೂ ದೀಪ್ತಿ ಶರ್ಮಾ

   

ಕೃಪೆ: X / @BCCIWomen

ವಡೋದರಾ: ಅನುಭವಿ ಆಫ್‌ ಸ್ಪಿನ್ನರ್ ದೀಪ್ತಿ ಶರ್ಮಾ ಅವರು ಜೀವನಶ್ರೇಷ್ಠ ಸಾಧನೆಯಲ್ಲಿ 31 ರನ್ನಿಗೆ 6 ವಿಕೆಟ್ ಪಡೆದರು. ನಂತರ ಬ್ಯಾಟಿನಿಂದಲೂ ಉಪಯುಕ್ತ ಕೊಡುಗೆ ನೀಡಿದರು. ಮಹಿಳಾ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಶುಕ್ರವಾರ ಭಾರತ ತಂಡ ಐದು ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿತು.

ADVERTISEMENT

ಸರಣಿ 3–0ಯಿಂದ ಆತಿಥೇಯರ ಪಾಲಾಯಿತು. ಟಾಸ್‌ ಗೆದ್ದುಕೊಂಡ ವೆಸ್ಟ್‌ ಇಂಡೀಸ್ ತಂಡ ಮೊದಲು ಆಡಿ 162 ರನ್‌ಗಳಿಗೆ ಆಲೌಟ್‌ ಆಯಿತು. ದೀಪ್ತಿ ಅವರ ಅಮೋಘ ಸಾಧನೆಗೆ ವೇಗದ ಬೌಲರ್ ರೇಣುಕಾ ಸಿಂಗ್ (29ಕ್ಕೆ4) ಬೆಂಬಲ ನೀಡಿ 10 ವಿಕೆಟ್‌ಗಳನ್ನು ತಮ್ಮೊಳಗೆ ಹಂಚಿಕೊಂಡರು. ಭಾರತ ಈ ಗುರಿಯನ್ನು 28.2 ಓವರುಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ ತಲುಪಿತು.

ಒದು ಹಂತದಲ್ಲಿ ಭಾರತ 4 ವಿಕೆಟ್‌ಗೆ 73 ರನ್ ಗಳಿಸಿ ಕುಸಿತದ ಭೀತಿಯಲ್ಲಿತ್ತು. ಆದರೆ ದೀಪ್ತಿ 48 ಎಸೆತಗಳಲ್ಲಿ ಅಜೇಯ 39 ರನ್ ಬಾರಿಸಿ ಬ್ಯಾಟಿಂಗ್‌ನಲ್ಲೂ ಮಿಂಚಿದರು. ಜೆಮಿಮಾ ರಾಡ್ರಿಗಸ್‌ (29) ಜೊತೆ ಐದನೇ ವಿಕೆಟ್‌ಗೆ 56 ರನ್ ಸೇರಿಸಿ ತಂಡವನ್ನು ಸುರಕ್ಷಿತವಾಗಿ ಗುರಿಯತ್ತ ಮುನ್ನಡೆಸಿದರು. ವಿಕೆಟ್ ಕೀಪರ್–ಬ್ಯಾಟರ್‌ ರಿಚಾ ಘೋಷ್‌ (ಅಜೇಯ 23, 11ಎ, 4x1, 6x3) ಅವರು ತಂಡ ಬೇಗ ಗುರಿತಲುಪಲು ನೆರವಾದರು.

ಆರಂಭಿಕ ಬ್ಯಾಟರ್‌ ಸ್ಮೃತಿ ಮಂದಾನ (4) ಮತ್ತು ಹಿಂದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಹರ್ಲೀನ್ ದಿಯೋಲ್ (1) ಬೇಗನೇ ನಿರ್ಗಮಿಸಿದ್ದರು. ನಾಯಕಿ ಹರ್ಮನ್‌ಪ್ರೀತ್ ಕೌರ್ (32) ಅವರೂ ಉಪಯುಕ್ತ ಕೊಡುಗೆ ನೀಡಿದರು.

ಇದಕ್ಕೆ ಮೊದಲು ವೇಗಿ ರೇಣುಕಾ ಸಿಂಗ್, ವೆಸ್ಟ್‌ ಇಂಡೀಸ್ ತಂಡಕ್ಕೆ ಆರಂಭದಲ್ಲೇ ಹೊಡೆತ ನೀಡಿದರು. ಕಿಯಾನ ಜೋಸೆಫ್ ಮತ್ತು ಹೆಯಲಿ ಮ್ಯಾಥ್ಯೂಸ್ ಖಾತೆ ತೆರೆಯುವ ಮೊದಕೇ ನಿರ್ಗಮಿಸಿದರು. ದಿಯಾಂಡ್ರ ದಾಟಿನ್ ಕೂಡ ರೇಣುಕಾ ಬೌಲಿಂಗ್‌ನಲ್ಲಿ ಬೌಲ್ಡ್‌ ಆದರು. ಶೆಮೆನ್ ಕ್ಯಾಂಪ್‌ಬೆಲ್ (46) ಮತ್ತು ಚಿನೆಲಿ ಹೆನ್ರಿ (61) ಅವರು ನಾಲ್ಕನೇ ವಿಕೆಟ್‌ಗೆ 91 ರನ್ ಸೇರಿಸಿ ತಂಡ ಅಲ್ಪಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು. ಮೂವರು ಮಾತ್ರ ಎರಡಂಕಿ ಮೊತ್ತ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ವೆಸ್ಟ್‌ ಇಂಡೀಸ್‌: 38.5 ಓವರುಗಳಲ್ಲಿ 162 (ಶೆಮೇನ್ ಕ್ಯಾಂಪ್‌ಬೆಲ್‌ 46, ಚಿನೆಲಿ ಹೆನ್ರಿ 61, ಆಲಿಯಾ ಅಲೇನ್ 21; ರೇಣುಕಾ ಸಿಂಗ್ 29ಕ್ಕೆ4, ದೀಪ್ತಿ ಶರ್ಮಾ 31ಕ್ಕೆ6); ಭಾರತ: 28.2 ಓವರುಗಳಲ್ಲಿ 5 ವಿಕೆಟ್‌ಗೆ 167 (ಹರ್ಮನ್‌ಪ್ರೀತ್ ಕೌರ್‌ 32, ಜೆಮಿಮಾ ರಾಡ್ರಿಗಸ್‌ 29, ದೀಪ್ತಿ ಶರ್ಮಾ 39, ರಿಚಾ ಘೋಷ್‌ ಔಟಾಗದೇ 23); ಪಂದ್ಯದ ಆಟಗಾರ್ತಿ: ದೀಪ್ತಿ ಶರ್ಮಾ; ಸರಣಿಯ ಆಟಗಾರ್ತಿ: ರೇಣುಕಾ ಸಿಂಗ್ (10 ವಿಕೆಟ್‌).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.