ADVERTISEMENT

Test Rankings: ಅಗ್ರಸ್ಥಾನದಲ್ಲಿ ಮುಂದುವರಿದ ಬೂಮ್ರಾ; ಜಡೇಜ ನಂ.1 ಆಲ್‌ರೌಂಡರ್

ಪಿಟಿಐ
Published 8 ಜನವರಿ 2025, 9:51 IST
Last Updated 8 ಜನವರಿ 2025, 9:51 IST
<div class="paragraphs"><p>ರವೀಂದ್ರ ಜಡೇಜ ಹಾಗೂ ಜಸ್‌ಪ್ರೀತ್‌ ಬೂಮ್ರಾ</p></div>

ರವೀಂದ್ರ ಜಡೇಜ ಹಾಗೂ ಜಸ್‌ಪ್ರೀತ್‌ ಬೂಮ್ರಾ

   

ಪಿಟಿಐ ಚಿತ್ರಗಳು

ದುಬೈ: ಭಾರತ ಕ್ರಿಕೆಟ್‌ ತಂಡದ ಪ್ರಮುಖ ವೇಗಿ ಜಸ್‌ಪ್ರೀತ್‌ ಬೂಮ್ರಾ ಅವರು ಐಸಿಸಿ ಟೆಸ್ಟ್‌ ಬೌಲರ್‌ಗಳ ರ‍್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.

ADVERTISEMENT

ಐಸಿಸಿಯು ನೂತನ ರ‍್ಯಾಂಕಿಂಗ್ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ.

ಬೂಮ್ರಾ, ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಬಾರ್ಡರ್‌–ಗವಾಸ್ಕರ್‌ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ, ಅತಿಹೆಚ್ಚು ರೇಟಿಂಗ್‌ (907) ಪಾಯಿಂಟ್ಸ್‌ ಗಳಿಸಿದ ಭಾರತೀಯ ಬೌಲರ್‌ ಎಂಬ ಸಾಧನೆ ಮಾಡಿದ್ದರು.

ಸಿಡ್ನಿಯಲ್ಲಿ ನಡೆದ ಅಂತಿಮ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಎರಡು ವಿಕೆಟ್‌ ಕಬಳಿಸುವುದರೊಂದಿಗೆ, ರೇಟಿಂಗ್‌ ಪಾಯಿಂಟ್‌ಗಳನ್ನು 908ಕ್ಕೆ ಏರಿಸಿಕೊಂಡಿದ್ದಾರೆ. ಇದು, ಅವರ ವೃತ್ತಿ ಜೀವನದ ಶ್ರೇಷ್ಠ ರೇಟಿಂಗ್‌ ಪಾಯಿಂಟ್‌ ಆಗಿದೆ. ಪಂದ್ಯದ ಮೊದಲ ಇನಿಂಗ್ಸ್‌ ವೇಳೆ ಗಾಯಗೊಂಡಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡಿರಲಿಲ್ಲ.

ಬೂಮ್ರಾ ಹೊರತುಪಡಿಸಿ, ರವೀಂದ್ರ ಜಡೇಜ ಅವರು ಅಗ್ರ ಹತ್ತನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು, ಆಸ್ಟ್ರೇಲಿಯಾದ ಸ್ಕಾಟ್‌ ಬೋಲ್ಯಾಂಡ್‌ ಅವರೊಂದಿಗೆ 9ನೇ ಸ್ಥಾನ ಹಂಚಿಕೊಂಡಿದ್ದಾರೆ. ಇಬ್ಬರಿಬ್ಬರೂ ತಲಾ 745 ರೇಟಿಂಗ್‌ ಪಾಯಿಂಟ್ಸ್‌ ಹೊಂದಿದ್ದಾರೆ.

ಭಾರತ ಎದುರಿನ ಸರಣಿಯ ಮೂರು ಪಂದ್ಯಗಳಲ್ಲೇ 21 ವಿಕೆಟ್‌ ಉರುಳಿಸಿದ್ದ ಬೋಲ್ಯಾಂಡ್‌, ಬರೋಬ್ಬರಿ 29 ಸ್ಥಾನ ಮೇಲೇರಿದ್ದಾರೆ.

ಉಳಿದಂತೆ, ಬೌಲರ್‌ಗಳ ವಿಭಾಗದಲ್ಲಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್‌ ಕಮಿನ್ಸ್‌ (841 ಪಾಯಿಂಟ್ಸ್‌) ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (837 ಪಾಯಿಂಟ್ಸ್‌) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಗಳಲ್ಲಿ ಇದ್ದಾರೆ.

ನಾಲ್ಕರಲ್ಲಿ ಜೈಸ್ವಾಲ್, 9ಕ್ಕೇರಿದ ಪಂತ್
ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿನ ಮೊದಲ ಐದು ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಇಂಗ್ಲೆಂಡ್‌ನ ಜೋ ರೂಟ್‌ ಮತ್ತು ಹ್ಯಾರಿ ಬ್ರೂಕ್‌ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿ ಇದ್ದಾರೆ. ಇವರಿಬ್ಬರ ಖಾತೆಯಲ್ಲಿ 895 ಮತ್ತು 876 ಪಾಯಿಂಟ್‌ಗಳಿವೆ. ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ (867), ಭಾರತದ ಯಶಸ್ವಿ ಜೈಸ್ವಾಲ್‌ (847) ಹಾಗೂ ಟ್ರಾವಿಸ್‌ ಹೆಡ್‌ (772) ನಂತರದ ಸ್ಥಾನಗಳಲ್ಲಿದ್ದಾರೆ.

ಆಸಿಸ್‌ ಸರಣಿಯ ಅಂತಿಮ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಭಾರತದ ರಿಷಭ್‌ ಪಂತ್‌, 3 ಸ್ಥಾನ ಮೇಲೇರಿ 9ರಲ್ಲಿ ಕಾಣಿಸಿಕೊಂಡಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯನ್ನು ಜಡೇಜ (400) ಮುನ್ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕೊ ಯಾನ್ಸನ್‌ (294), ಬಾಂಗ್ಲಾದೇಶದ ಮೆಹದಿ ಹಸನ್‌ (284) ನಂತರದ ಸ್ಥಾನಗಳಲ್ಲಿದ್ದಾರೆ.

ತಂಡಗಳ ವಿಭಾಗದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಭಾರತ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.