ADVERTISEMENT

ICC Rankings: ಕೊಹ್ಲಿ ಅಗ್ರ, ರೋಹಿತ್ ನಂ. 2; ಟಾಪ್ 50ರ ಪಟ್ಟಿಗೆ ಪಾಂಡ್ಯ

ಏಜೆನ್ಸೀಸ್
Published 10 ಡಿಸೆಂಬರ್ 2020, 12:51 IST
Last Updated 10 ಡಿಸೆಂಬರ್ 2020, 12:51 IST
ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ
ಹಾರ್ದಿಕ್ ಪಾಂಡ್ಯ, ವಿರಾಟ್ ಕೊಹ್ಲಿ   

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ತಾಜಾ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇದರೊಂದಿಗೆ 2020ನೇ ಸಾಲಿಗೆ ಅಗ್ರಪಟ್ಟದೊಂದಿಗೆ ಗುಡ್ ಬೈ ಹೇಳಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಬಾರಿಸಿರುವುದು ವಿರಾಟ್‌ಗೆ 870 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಳ್ಳಲು ನೆರವಾಗಿದೆ. ಏಕದಿನ ಸರಣಿಯಲ್ಲಿ ಭಾರತ 1-2ರ ಅಂತರದಲ್ಲಿ ಸೋಲನುಭವಿಸಿದರೂ ಸಿಡ್ನಿ ಹಾಗೂ ಕ್ಯಾನ್‌ಬೆರಾದಲ್ಲಿ ನಡೆದ ಅಂತಿಮ ಏಕದಿನಗಳಲ್ಲಿ ವಿರಾಟ್ ಕೊಹ್ಲಿ ಅನುಕ್ರಮವಾಗಿ 89 ಹಾಗೂ 63 ರನ್ ಗಳಿಸಿದ್ದರು.

ಅತ್ತ ಗಾಯದಿಂದಾಗಿ ಏಕದಿನ ಸರಣಿಯಿಂದ ಹೊರಗುಳಿದಿರುವ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 842 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಬಾಬರ್ ಅಜಾಮ್ (837) ಹಾಗೂ ನ್ಯೂಜಿಲೆಂಡ್‌ನ ರಾಸ್ ಟೇಲರ್ (818) ಅನುಕ್ರಮವಾಗಿ ಮೂರು ಹಾಗೂ ನಾಲ್ಕನೇ ಕ್ರಮಾಂಕಗಳನ್ನು ಹಂಚಿಕೊಂಡರು.

ADVERTISEMENT

ಇನ್ನು ಎರಡು ಸ್ಥಾನಗಳ ನೆಗೆತ ಕಂಡಿರುವ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ 791 ಅಂಕಗಳೊಂದಿಗೆ ಐದನೇ ಸ್ಥಾನ ಆಲಂಕರಿಸಿದ್ದಾರೆ. ಡೇವಿಡ್ ವಾರ್ನರ್ ಕೂಡಾ ಒಂದು ಸ್ಥಾನ ಬಡ್ತಿ ಪಡೆದು ಏಳನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟ್ಸ್‌ಮನ್ ಫಾಫ್ ಡು ಪ್ಲೆಸಿಸ್ (ಒಂದು) ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (ಎರಡು) ಶ್ರೇಯಾಂಕದಲ್ಲಿ ಕುಸಿತ ಅನುಭವಿಸಿದ್ದಾರೆ. ಇನ್ನುಳಿದಂತೆ ಕ್ವಿಂಟನ್ ಡಿ ಕಾಕ್ ಹಾಗೂ ಜಾನಿ ಬೈರ್‌ಸ್ಟೋ ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಟಾಪ್ 50ರ ಪಟ್ಟಿಗೆ ಹಾರ್ದಿಕ್ ಪಾಂಡ್ಯ...
ಏತನ್ಮಧ್ಯೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿಯಲ್ಲಿ ಅದ್ಭುತ ನಿರ್ವಹಣೆ ನೀಡಿರುವ ಹಾರ್ದಿಕ್ ಪಾಂಡ್ಯ, ಟಾಪ್ 50ರ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಲಗ್ಗೆಯಿಟ್ಟಿದ್ದಾರೆ. ಹಾಗೆಯೇ 553 ಅಂಕಗಳೊಂದಿಗೆ 49ನೇ ಸ್ಥಾನ ಪಡೆದಿದ್ದಾರೆ. ಆಸೀಸ್ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಪಾಂಡ್ಯ, ಮೊದಲ ಹಾಗೂ ಅಂತಿಮಪಂದ್ಯಗಳಲ್ಲಿ ಅನುಕ್ರಮವಾಗಿ 90 ಮತ್ತು 92* ರನ್ ಗಳಿಸಿದ್ದರು.

ಅತ್ತ ಬೌಲಿಂಗ್ ವಿಭಾಗದಲ್ಲಿ ನಿರಾಶಜನಕ ಪ್ರದರ್ಶನ ನೀಡಿರುವ ಜಸ್ಪ್ರೀತ್ ಬುಮ್ರಾ ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಐಸಿಸಿ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್ ಪಟ್ಟಿ ಇಂತಿದೆ:
1. ವಿರಾಟ್ ಕೊಹ್ಲಿ (870)
2. ರೋಹಿತ್ ಶರ್ಮಾ (842)
3. ಬಾಬರ್ ಅಜಾಮ್ (837)
4. ರಾಸ್ ಟೇಲರ್ (818)
5. ಆ್ಯರನ್ ಫಿಂಚ್ (791)
6. ಫಾಫ್ ಡು ಪ್ಲೆಸಿಸ್ (790)
7. ಡೇವಿಡ್ ವಾರ್ನರ್ (773)
8. ಕೇನ್ ವಿಲಿಯಮ್ಸನ್ (765)
9. ಕ್ವಿಂಟನ್ ಡಿ ಕಾಕ್ (755)
10. ಜಾನಿ ಬೈರ್‌ಸ್ಟೋ (754)

ಐಸಿಸಿ ಏಕದಿನ ಬೌಲಿಂಗ್ ರ‍್ಯಾಂಕಿಂಗ್ ಪಟ್ಟಿ ಇಂತಿದೆ:
1. ಟ್ರೆಂಟ್ ಬೌಲ್ಟ್ (722)
2. ಮುಜೀಬ್ ಉರ್ ರೆಹಮಾನ್ (701)
3. ಜಸ್ಪ್ರೀತ್ ಬುಮ್ರಾ (700)
4. ಕ್ರಿಸ್ ವೋಕ್ಸ್ (675)
5. ಕಗಿಸೋ ರಬಡ (665)
6. ಜೋಶ್ ಹ್ಯಾಜಲ್‌ವುಡ್ (660)
7. ಮೊಹಮ್ಮದ್ ಆಮೀರ್ (647)
8. ಪ್ಯಾಟ್ ಕಮಿನ್ಸ್ (646)
9. ಮ್ಯಾಟ್ ಹೆನ್ರಿ (641)
10. ಜೋಫ್ರಾ ಆರ್ಚರ್ (637)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.