ದುಬೈ: ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಆಗಸ್ಟ್ ತಿಂಗಳ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಅವರ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಈ ಪ್ರಶಸ್ತಿ ಲಭಿಸಿದೆ.
ಸಿರಾಜ್ ಜೊತೆಗೆ ಐರ್ಲೆಂಡ್‌ನ ಒರ್ಲಾ ಪ್ರೆಂಡರ್‌ಗ್ಯಾಸ್ಟ್ ಸಹ ತಿಂಗಳ ಆಟಗಾರ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.
ಓವಲ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಸಿರಾಜ್ ಅವರು ನೀಡಿದ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶನದಿಂದ ತಂಡ 6 ರನ್‌ಗಳ ರೋಚಕ ಗೆಲುವು ದಾಖಲಿಸಿತ್ತು. ಕೊನೆಯ ದಿನ ಮೂರು ವಿಕೆಟ್ ಉರುಳಿಸಿದ್ದ ಸಿರಾಜ್, ಆ ಪಂದ್ಯದಲ್ಲಿ ಒಟ್ಟು 9 ವಿಕೆಟ್ ಪಡೆದಿದ್ದರು. ಆ ಗೆಲುವಿನೊಂದಿಗೆ ತಂಡ 2–2ರಿಂದ ಸರಣಿ ಸಮಬಲ ಸಾಧಿಸಿತ್ತು.
'ಐಸಿಸಿ ತಿಂಗಳ ಆಟಗಾರ ಎಂದು ಹೆಸರಿಸಲ್ಪಟ್ಟಿರುವುದು ವಿಶೇಷ ಗೌರವ. ಆಂಡರ್ಸನ್-ತೆಂಡೂಲ್ಕರ್ ಟ್ರೋಫಿ ಒಂದು ಸ್ಮರಣೀಯ ಸರಣಿಯಾಗಿತ್ತು, ಅತ್ಯಂತ ಸ್ಪರ್ಧಾತ್ಮಕ ಸರಣಿಯಾಗಿತ್ತು. ನಿರ್ಣಾಯಕ ಕ್ಷಣಗಳಲ್ಲಿ ಕೆಲವು ಪ್ರಮುಖ ಸ್ಪೆಲ್‌ಗಳೊಂದಿಗೆ ನಾನೂ ತಂಡಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯವಾಯಿತು ಎಂಬ ಬಗ್ಗೆ ಹೆಮ್ಮೆ ಇದೆ. ಅವರ ತವರು ಪರಿಸ್ಥಿತಿಯಲ್ಲಿ ಅತ್ಯದ್ಭುತ ಬ್ಯಾಟಿಂಗ್ ಲೈನ್‌ಅಪ್ ವಿರುದ್ಧ ಬೌಲಿಂಗ್ ಮಾಡುವುದು ಸವಾಲಿನ ಕೆಲಸವಾಗಿತ್ತು, ಆದರೆ, ಆ ಸವಾಲು ನನ್ನ ಅತ್ಯುತ್ತಮ ಆಟವನ್ನು ಹೊರಹಾಕಲು ನೆರವಾಯಿತು’ಎಂದು ಸಿರಾಜ್ ಹೇಳಿದ್ದಾರೆ.
ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟರ್ ಮುನೀಬಾ ಅಲಿ ಮತ್ತು ನೆದರ್‌ಲ್ಯಾಂಡ್ಸ್‌ನ ವೇಗದ ಬೌಲರ್ ಇರಿ ಅವರನ್ನು ಹಿಂದಿಕ್ಕಿ ಐರ್ಲೆಂಡ್ ಆಲ್‌ರೌಂಡರ್ ಪ್ರೆಂಡರ್‌ಗ್ಯಾಸ್ಟ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಪಾಕಿಸ್ತಾನ ವಿರುದ್ಧ ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ ಐರ್ಲೆಂಡ್ 2–1ರಿಂದ ಗೆಲುವು ದಾಖಲಿಸಿತ್ತು. ಪ್ರೆಂಡರ್‌ಗ್ಯಾಸ್ಟ್ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.