
ವಿರಾಟ್ ಕೊಹ್ಲಿ
ಕೃಪೆ: ಪಿಟಿಐ
ದುಬೈ: ಇತ್ತೀಚೆಗೆ ನಡದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ, ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಎರಡು ಸ್ಥಾನ ಮೇಲೇರಿದ್ದಾರೆ.
2021ರ ಏಪ್ರಿಲ್‌ನಲ್ಲಿ ಅಗ್ರಸ್ಥಾನದಿಂದ ಕೆಳಗಿಳಿದಿದ್ದ ಅವರು, ಮತ್ತೊಮ್ಮೆ ನಂಬರ್ 1 ಬ್ಯಾಟರ್ ಎನಿಸಿಕೊಳ್ಳುವತ್ತ ದಾಪುಗಾಲಿಟ್ಟಿದ್ದಾರೆ.
ಬುಧವಾರ (ಇಂದು) ಬಿಡುಗಡೆಯಾಗಿರುವ ಐಸಿಸಿ ಏಕದಿನ ಬ್ಯಾಟರ್‌ಗಳ ಲಿಸ್ಟ್‌ನಲ್ಲಿ ಭಾರತ ಮೂವರು ಅಗ್ರ ಐದರಲ್ಲಿ ಕಾಣಿಸಿಕೊಂಡಿದ್ದಾರೆ.
2ನೇ ಸ್ಥಾನಕ್ಕೇರಿರುವ 'ಕಿಂಗ್' ಕೊಹ್ಲಿ, ನ್ಯೂಜಿಲೆಂಡ್‌ನ ಡೆರಿಲ್ ಮಿಚೇಲ್, ಅಫ್ಗಾನಿಸ್ತಾನದ ಇಬ್ರಾಹಿಂ ಜದ್ರಾನ್ ಅವರನ್ನು ಹಿಂದಿಕ್ಕಿದ್ದಾರೆ. 'ಹಿಟ್‌ಮ್ಯಾನ್' ರೋಹಿತ್ ಶರ್ಮಾ, ಅಗ್ರಸ್ಥಾನ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಎರಡು ಶತಕ ಹಾಗೂ ಅರ್ಧಶತಕ ಸಹಿತ 302 ರನ್ ಕಲೆಹಾಕಿದ್ದರು. ರೋಹಿತ್, ಎರಡು ಅರ್ಧಶತಕ ಸಹಿತ 146 ರನ್ ಗಳಿಸಿದ್ದರು.
ರೋಹಿತ್ ಖಾತೆಯಲ್ಲಿ ಸದ್ಯ 781 ಪಾಯಿಂಟ್‌ಗಳಿವೆ. ಕೊಹ್ಲಿ ಬಳಿ 773 ಪಾಯಿಂಟ್ ಇವೆ. ಮಿಚೇಲ್, ಜದ್ರಾನ್ ಮತ್ತು ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್, ಕ್ರಮವಾಗಿ ನಂತರದ ಮೂರು ಸ್ಥಾನಗಳಲ್ಲಿ ಇದ್ದಾರೆ.
ಕುಲದೀಪ್, ಪಾಂಡ್ಯಗೂ ಬಡ್ತಿ
ಆಫ್ರಿಕಾ ವಿರುದ್ಧದ ಸರಣಿಯ ಮೂರು ಪಂದ್ಯಗಳಿಂದ 9 ವಿಕೆಟ್ ಉರುಳಿಸಿದ್ದ ಎಡಗೈ ಸ್ಮಿನ್ನರ್ ಕುಲದೀಪ್ ಯಾದವ್ ಅವರೂ, ಏಕದಿನ ಬೌಲರ್‌ಗಳ ವಿಭಾಗದಲ್ಲಿ ಮೇಲೇರಿದ್ದಾರೆ.
ಕುಲದೀಪ್ ಖಾತೆಯಲ್ಲಿ 655 ಪಾಯಿಂಟ್‌ಗಳಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.
ಟಿ20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆದಿರುವ ಹಾರ್ದಿಕ್ ಪಾಂಡ್ಯ ಟಿ20 ಆಲ್‌ರೌಂಡರ್‌ಗಳ ವಿಭಾಗದಲ್ಲಿ, ಮೂರು ಸ್ಥಾನ ಮೇಲೇರಿ 4ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಟೆಸ್ಟ್ ಹಾಗೂ ಟಿ20 ಬೌಲರ್‌ಗಳ ವಿಭಾಗದಲ್ಲಿ ಭಾರತದವರೇ ಆದ ವೇಗಿ ಜಸ್‌ಪ್ರೀತ್ ಬೂಮ್ರಾ ಮತ್ತು ಸ್ಪಿನ್ನರ್ ವರುಣ್ ಚಕ್ರವರ್ತಿ ಕ್ರಮವಾಗಿ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.