ADVERTISEMENT

T20 World Cup: ಪಾಕಿಸ್ತಾನಕ್ಕೆ ಎರಡನೇ ಗೆಲುವು, ಅಮೆರಿಕಕ್ಕೆ ಸೋಲು

ಫರ್ಹಾನ್ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 18:02 IST
Last Updated 10 ಫೆಬ್ರುವರಿ 2026, 18:02 IST
<div class="paragraphs"><p>ಪಾಕಿಸ್ತಾನ ತಂಡದ ಸಾಹಿಬ್‌ಝಾದಾ ಫರ್ಹಾನ್ ಬ್ಯಾಟಿಂಗ್‌ &nbsp;</p></div>

ಪಾಕಿಸ್ತಾನ ತಂಡದ ಸಾಹಿಬ್‌ಝಾದಾ ಫರ್ಹಾನ್ ಬ್ಯಾಟಿಂಗ್‌  

   

ಪಿಟಿಐ ಚಿತ್ರ

ಕೊಲಂಬೊ: ಸಾಹಿಬ್‌ಝಾದಾ ಫರ್ಹಾನ್ ಅವರ ಮಿಂಚಿನ ಅರ್ಧಶತಕದ ಬಳಿಕ ಸ್ಪಿನ್ನರ್‌ಗಳ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿತು.

ADVERTISEMENT

ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವು 32 ರನ್‌ಗಳಿಂದ ಅಮೆರಿಕ ತಂಡವನ್ನು ಮಣಿಸಿತು. ಈ ಗೆಲುವಿನೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು. ಅಮೆರಿಕ ತಂಡಕ್ಕೆ ಇದು ಸತತ ಎರಡನೇ ಸೋಲು.

ಆರಂಭಿಕ ಬ್ಯಾಟರ್ ಫರ್ಹಾನ್ (73; 41ಎ, 4x6, 6x5) ಅವರ ಬ್ಯಾಟಿಂಗ್‌ ಬಲದಿಂದ ಪಾಕ್‌ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 ರನ್‌ ಗಳಿಸಿತು. ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಅಮೆರಿಕ ತಂಡವು 8 ವಿಕೆಟ್‌ಗೆ 158 ರನ್‌ ಗಳಿಸಿ ಹೋರಾಟವನ್ನು ಮುಗಿಸಿತು. ಕಳೆದ ಆವೃತ್ತಿಯಲ್ಲಿ ಪಾಕ್‌ಗೆ ಆಘಾತ ನೀಡಿದ್ದ ಅಮೆರಿಕ ಈ ಬಾರಿ ಉತ್ತಮ ಹೋರಾಟ ತೋರಿತಾದರೂ ಗೆಲುವಿಗೆ ಸಾಕಾಗಲಿಲ್ಲ. 

ಆರಂಭಿಕ ಆಟಗಾರ ಶಯಾನ್ ಜಹಾಂಗೀರ್ (49;34ಎ), ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾದ ಶುಭಂ ರಂಜನೆ (51;30ಎ) ಮತ್ತು ಮಿಲಿಂದ್‌ ಕುಮಾರ್‌ (29;22) ಹೊರತುಪಡಿಸಿ ಉಳಿದವರು ನಿರಾಸೆ ಮೂಡಿಸಿದರು. ಪಾಕ್‌ ಸಂಜಾತ ಜಹಾಂಗೀರ್ ಅರ್ಧಶತಕದ ಹೊಸ್ತಿಲಲ್ಲಿ ಎಡವಿದರು. ಸ್ಪಿನ್ನರ್‌ಗಳಾದ ಉಸ್ಮಾನ್ ತಾರಿಕ್ ಮೂರು ವಿಕೆಟ್‌ ಪಡೆದರೆ, ಶಾದಾಬ್ ಖಾನ್ ಎರಡು ವಿಕೆಟ್‌ ಕಬಲಿಸಿ ಅಮೆರಿಕ ತಂಡವನ್ನು ಕಟ್ಟಿಹಾಕಲು ನೆರವಾದರು.

ಇದಕ್ಕೂ ಮೊದಲು ಟಾಸ್ ಗೆದ್ದ ಅಮೆರಿಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವೇಗಿ ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್ (25ಕ್ಕೆ4) ಅವರ ಪರಿಣಾಮಕಾರಿ ದಾಳಿಯ ನಡುವೆಯೂ ಪಾಕ್‌ ಸ್ಪರ್ಧಾತ್ಮಕ ಮೊತ್ತ ಗಳಿಸಿತು.

ಸಯಾಮ್ ಅಯೂಬ್ (19; 17ಎ) ಮತ್ತು ಫರ್ಹಾನ್ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 54 ರನ್ ಸೇರಿಸಿದರು. ಶಾಡ್ಲಿ ಆರನೇ ಓವರ್‌ನಲ್ಲಿ ಅಯೂಬ್ ವಿಕೆಟ್ ಗಳಿಸಿ, ಜೊತೆಯಾಟ ಮುರಿದರು. ನಾಯಕ ಸಲೀಂ ಆಘಾ (1) ಅವರ ವಿಕೆಟ್ ಕೂಡ ಶ್ಯಾಡ್ಲಿ ಖಾತೆ ಸೇರಿತು.

ಫರ್ಹಾನ್ ಮತ್ತು ಬಾಬರ್ ಆಜಂ (46; 32ಎ) ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 81 ರನ್‌ ಸೇರಿಸಿದರು. ಬಾಬರ್ ಅವರು ಅರ್ಧಶತಕದ ಸನಿಹವಿದ್ದಾಗ ಮೊಹಮ್ಮದ್ ಮೊಹ್ಸಿನ್ ಬೌಲಿಂಗ್‌ನಲ್ಲಿ ಮಿಲಿಂದ್‌ಕುಮಾರ್ ಪಡೆದ ಕ್ಯಾಚ್‌ಗೆ ನಿರ್ಗಮಿಸಿದರು. ಕೊನೆಯಲ್ಲಿ ಶಾದಾಬ್ ಖಾನ್ (30; 12ಎ) ಅಬ್ಬರಿಸಿ, ತಂಡದ ಮೊತ್ತವನ್ನು ಇನ್ನೂರ ಸನಿಹ ಕೊಂಡೊಯ್ದರು. 

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ 9ಕ್ಕೆ190 (ಸಾಹೀಬ್‌ಝಾದಾ ಫರ್ಹಾನ್ 73, ಬಾಬರ್ ಆಜಂ 46, ಶಾದಾಬ್ ಖಾನ್ 30, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್ 25ಕ್ಕೆ4) ಅಮೆರಿಕ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 158 (ಶಯಾನ್ ಜಹಾಂಗೀರ್ 49, ಮಿಲಿಂದ್‌ ಕುಮಾರ್‌ 29, ಶುಭಂ ರಂಜನೆ 51; ಉಸ್ಮಾನ್ ತಾರಿಕ್ 27ಕ್ಕೆ 3, ಶಾದಾಬ್ ಖಾನ್ 26ಕ್ಕೆ 2). ಪಂದ್ಯದ ಆಟಗಾರ: ಸಾಹೀಬ್‌ಝಾದಾ ಫರ್ಹಾನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.