
ನವದೆಹಲಿ: ಭಾರತದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಹಾಗೂ ಸ್ಪಿನ್ ಬೌಲರ್ ವರುಣ್ ಚಕ್ರವರ್ತಿ ಅವರು ಐಸಿಸಿ ನೂತನ ಟಿ–20 ರ್‍ಯಾಂಕಿಂಗ್‌ನಲ್ಲಿ ಬ್ಯಾಟರ್ ಹಾಗೂ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದಾರೆ.
ಸ್ಪೋಟಕ ಆಟಗಾರ ಅಭಿಷೇಕ್ ಶರ್ಮಾ ಅವರು ಟಿ–20 ರ್‍ಯಾಂಕಿಂಗ್‌ನ ಬ್ಯಾಟರ್‌ಗಳ ಪಟ್ಟಿಯಲ್ಲಿ 909 ಪಾಯಿಂಟ್ ಹೊಂದುವ ಮೂಲಕ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ರ‍್ಯಾಂಕಿಂಗ್‌ನಲ್ಲಿ 2ನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ನ ಫಿಲ್ ಸಾಲ್ಟ್ 849 ಪಾಯಿಂಟ್ ಹೊಂದಿದ್ದಾರೆ.
ಭಾರತದ ತಿಲಕ್ ವರ್ಮಾ ಅವರು ಎರಡು ಸ್ಥಾನ ಮೇಲೇರಿದ್ದು, 774 ಪಾಯಿಂಟ್‌ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಫಾರ್ಮ್ ಕಳೆದುಕೊಂಡಿರುವ ನಾಯಕ ಸೂರ್ಯ ಕುಮಾರ್ ಯಾದವ್ ಅವರು ಒಂದು ಸ್ಥಾನ ಕುಸಿತ ಕಂಡಿದ್ದು, 669 ಪಾಯಿಂಟ್‌ಗಳೊಂದಿಗೆ 10ನೇ ಸ್ಥಾನದಲ್ಲಿದ್ದಾರೆ.
ಭಾರತದ ಪ್ರಮುಖ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರು 818 ಪಾಯಿಂಟ್‌ಗಳೊಂದಿಗೆ ನೂತನ ಟಿ–20 ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ಟಿ–20 ರ‍್ಯಾಂಕಿಂಗ್‌ನಲ್ಲಿ ಭಾರತದ ಬೌಲರ್ ಒಬ್ಬರ ಅತ್ಯುತ್ತಮ ಸಾಧನೆ ಇದಾಗಿದೆ. ಈ ಹಿಂದೆ ಬೂಮ್ರಾ ಅವರು 783 ಪಾಯಿಂಟ್ ಹೊಂದಿದ್ದರು.
ಐಪಿಎಲ್ ಮಿನಿ ಹರಾಜಿನಲ್ಲಿ ಮೂಲಬೆಲೆ ₹2 ಕೋಟಿಗೆ ಆರ್‌ಸಿಬಿ ಪಾಲಾಗಿರುವ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜಾಕೋಬ್ ಡಫಿ ಅವರು 699 ಪಾಯಿಂಟ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಭಾರತದ ಸ್ಪಿನ್ ಆಲ್‌ರೌಂಡರ್ ಅಕ್ಷರ್ ಪಟೇಲ್ 13ನೇ ಸ್ಥಾನ ಹಾಗೂ ವೇಗಿ ಅರ್ಷದೀಪ್ ಸಿಂಗ್ ಅವರು 4 ಸ್ಥಾನ ಏರಿಕೆ ಕಂಡಿದ್ದು, 16ನೇ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಸೈಮ್ ಆಯೂಬ್ 295 ಪಾಯಿಂಟ್‌ನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಹಾರ್ದಿಕ್ ಪಾಂಡ್ಯಾ, 222 ಪಾಯಿಂಟ್‌ಗಳೊಂದಿಗೆ 4ನೇ ಸ್ಥಾನದಲ್ಲಿದ್ದಾರೆ. ಅಕ್ಷರ್ ಪಟೇಲ್ 186 ಪಾಯಿಂಟ್‌ನೊಂದಿಗೆ 9ನೇ ಸ್ಥಾನದಲ್ಲಿದ್ದಾರೆ.
ಟಿ–20 ತಂಡಗಳ ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲೇ ಮುಂದುವರಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.