ADVERTISEMENT

ಯುವ ವಿಶ್ವಕಪ್ | ಸತತ ಮೂರನೇ ಸಲ ಫೈನಲ್ ತಲುಪಿ ದಾಖಲೆ ಬರೆದ ಭಾರತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 12:04 IST
Last Updated 6 ಫೆಬ್ರುವರಿ 2020, 12:04 IST
   

ಪೊಷೆಫ್‌ಸ್ಟ್ರೂಮ್‌:19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿದಭಾರತ ತಂಡ ಸತತ ಮೂರನೇ ಬಾರಿಗೆ ಫೈನಲ್‌ಗೇರಿದ ಸಾಧನೆ ಮಾಡಿತು.

ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕ್‌, 172 ರನ್‌ ಗಳಿಸಿ ಆಲೌಟ್‌ ಆಗಿತ್ತು. ಭಾರತ ಈ ಮೊತ್ತವನ್ನು ಒಂದೂ ವಿಕೆಟ್‌ ಕಳೆದುಕೊಳ್ಳದೆ ತಲುಪಿ ಫೈನಲ್‌ ತಲುಪಿತು. ಆ ಮೂಲಕ ಯುವ ವಿಶ್ವಕಪ್‌ ಇತಿಹಾಸದಲ್ಲಿ ಸತತ 3 ಸಲ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿಕೊಂಡಿತು.

2016ರ ವಿಶ್ವಕಪ್‌ನಲ್ಲಿ ಶ್ರೀಲಂಕಾವನ್ನು ಸೋಲಿಸಿ ಫೈನಲ್‌ ತಲುಪಿದ್ದ ಭಾರತ, ಅಂತಿಮ ಹಂತದಲ್ಲಿ ವೆಸ್ಟ್‌ ಇಂಡೀಸ್‌ಗೆ ಮಣಿದಿತ್ತು. 2018ರಲ್ಲಿ ಪಾಕಿಸ್ಥಾನ ವಿರುದ್ಧ ಗೆದ್ದು ಫೈನಲ್‌ ತಲುಪಿತ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಚಾಂಪಿಯನ್‌ ಎನಿಸಿತ್ತು.

ADVERTISEMENT

ಭಾರತ ಇದುವರೆಗೆ ನಾಲ್ಕು ಸಲ(2000, 2008, 2012 ಮತ್ತು 2018ರಲ್ಲಿ) ಪ್ರಶಸ್ತಿ ಗೆದ್ದಿದೆ.

ಜೈಸ್ವಾಲ್‌–ಸಕ್ಸೇನಾ ದಾಖಲೆ
ಈ ಬಾರಿಯ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ನೀಡಿದ ಗುರಿ ಎದುರು ನಿರಾಯಾಸವಾಗಿ ಬ್ಯಾಟ್‌ ಬೀಸಿದ ಆರಂಭಿಕ ಜೋಡಿ ಯಶಸ್ವಿ ಜೈಸ್ವಾಲ್ ಮತ್ತು ದಿವ್ಯಾಂಶ್‌ ಸಕ್ಸೇನಾ ಮುರಿಯದ ಮೊದಲ ವಿಕೆಟ್‌ಗೆ 176 ರನ್‌ ಗಳಿಸಿ ಗೆಲುವು ತಂದುಕೊಟ್ಟರು.ಇದು 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಯಾವುದೇ ವಿಕೆಟ್‌ಗೆ ದಾಖಲಾದ ಗರಿಷ್ಠ ರನ್‌ ಆಗಿದೆ.

2014ರ ಟೂರ್ನಿಯಲ್ಲಿ ಸರ್ಫರಾಜ್‌ ಖಾನ್‌ ಮತ್ತು ಸಂಜು ಸ್ಯಾಮ್ಸನ್‌ ಐದನೇ ವಿಕೆಟ್‌ ಜೊತೆಯಾಟದಲ್ಲಿ 119 ರನ್‌ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು.

ಜೈಸ್ವಾಲ್‌ 113 ಎಸೆತಗಳಲ್ಲಿ8 ಬೌಂಡರಿ 4 ಸಿಕ್ಸರ್ ಸಹಿತ 105 ರನ್‌ ಗಳಿಸಿದರೆ, ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿದಸಕ್ಸೇನಾ 99 ಎಸೆತಗಳಲ್ಲಿ 59 ರನ್‌ ಕಲೆಹಾಕಿದರು.ಈ ಶತಕದೊಂದಿಗೆ ಆಡಿರುವ ಐದು ಪಂದ್ಯಗಳಲ್ಲಿ312 ರನ್‌ ಗಳಿಸಿರುವ ಜೈಸ್ವಾಲ್‌, ಈ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಕಲೆಹಾಕಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರದರು. 6 ಪಂದ್ಯಗಳಿಂದ 286 ರನ್ ಗಳಿಸಿರುವ ಶ್ರೀಲಂಕಾದ ರಶಂತಾ ಎರಡನೇ ಸ್ಥಾನಕ್ಕೆ ಜಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.