
ಢಾಕಾ: ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಬಾಂಗ್ಲಾದೇಶ ತಂಡದ ಸುರಕ್ಷತೆಗೆ ಸಂಬಂಧಿಸಿದಂತೆ ತಮ್ಮ ಮನವಿಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯು ಸ್ಪಂದಿಸುವುದಾಗಿ 'ಭರವಸೆ’ ನೀಡಿದೆ ಎಂದು ಬಾಂಗ್ಲಾ ಕ್ರಿಕೆಟ್ ಮಂಡಳಿ (ಬಿಸಿಬಿ) ಹೇಳಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಕೋಲ್ಕತ್ತ ನೈಟ್ ರೈಡರ್ಸ್ ತಂಡದಲ್ಲಿದ್ದ ಬಾಂಗ್ಲಾದ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ತೆಗೆದುಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದ ಬಾಂಗ್ಲಾ ಕ್ರಿಕೆಟ್ ಮಂಡಳಿಯು ಮುಂದಿನ ತಿಂಗಳು ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಹೇಳಿತ್ತು. ತಾನು ಆಡುವ ಪಂದ್ಯಗಳನ್ನು ಶ್ರೀಲಂಕೆಗೆ ಸ್ಥಳಾಂತರಿಸಬೇಕು ಎಂದು ಐಸಿಸಿಗೆ ಮನವಿ ಸಲ್ಲಿಸಿತ್ತು.
ಬುಧವಾರ ಈ ಕುರಿತು ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಂ ಮತ್ತು ಬಾಂಗ್ಲಾ ಸರ್ಕಾರದ ಪ್ರತಿನಿಧಿ ಆಸಿಫ್ ನಜ್ರುಲ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಭಾರತದಲ್ಲಿ ಆಡಿ ಇಲ್ಲವಾದರೆ ಪಾಯಿಂಟ್‌ಗಳನ್ನು ಕಳೆದುಕೊಳ್ಳಲು ಸಿದ್ಧರಾಗಿ’ ಎಂದು ಐಸಿಸಿ ಹೇಳಿದೆ ಎಂಬ ವರದಿಗಳನ್ನು ಬಿಸಿಬಿ ಅಲ್ಲಗಳೆದಿದೆ.
‘ಶ್ರೀಲಂಕೆಯಲ್ಲಿ ಬಾಂಗ್ಲಾದ ಪಂದ್ಯಗಳನ್ನು ನಡೆಸುವುದು ಸಾಧ್ಯವಿಲ್ಲ ಎಂಬ ವರದಿಗಳು ಸುಳ್ಳು. ನಾನು ಇದನ್ನು ಪ್ರಚಾರ ತಂತ್ರ, ಸುಳ್ಳು ಸುದ್ದಿ ಎಂದೇ ಕರೆಯುತ್ತೇನೆ. ಐಸಿಸಿಯೊಂದಿಗೆ ನಾವು ಈಗಲೂ ಸಂಪರ್ಕದಲ್ಲಿದ್ದು ಮಾತುಕತೆಗಳು ನಡೆಯುತ್ತಿವೆ. ಪರಿಸ್ಥಿತಿಯ ಕುರಿತು ನಾವು ಪೂರ್ಣಪ್ರಮಾಣದಲ್ಲಿ ವಿವರಿಸಿದ್ದೇವೆ’ ಎಂದು ಅಮಿನುಲ್ ಇಸ್ಲಾಂ ಹೇಳಿದರು.
‘ಭಾರತದಲ್ಲಿ ಬಾಂಗ್ಲಾದೇಶ ತಂಡವು ನಿರಾತಂಕವಾಗಿ ಆಡಲು ಭದ್ರತೆ ವ್ಯವಸ್ಥೆಯ ಕುರಿತು ಕಾಳಜಿ ವಹಿಸುವುದಾಗಿ ಐಸಿಸಿ ಭರವಸೆ ನೀಡಿದೆ. ಈ ವಿಷಯದಲ್ಲಿ ಬಿಸಿಬಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದು ಕಾರ್ಯನಿರ್ವಹಿಸುವುದಾಗಿಯೂ ಐಸಿಸಿ ತಿಳಿಸಿದೆ’ ಎಂದರು.
‘ಹೈಬ್ರಿಡ್ ಮಾದರಿಯಲ್ಲಿ ಆಡಲು ಸಾಧ್ಯವಿದೆ. ಪಾಕಿಸ್ತಾನ ಮತ್ತು ಭಾರತ ತಂಡಗಳು ತಟಸ್ಥ ತಾಣಗಳಲ್ಲಿ ಆಡಿದ ಉದಾಹರಣೆಗಳಿವೆ. ಅದು ಕೂಡ ಭದ್ರತೆಗೆ ಸಂಬಂಧಪಟ್ಟ ವಿಷಯವೇ ಆಗಿತ್ತು. ಈಗಲೂ ಹೈಬ್ರಿಡ್ ಮಾದರಿಯಲ್ಲಿಯೇ ಆ ತಂಡಗಳು ಆಡಲಿವೆ. ಬಾಂಗ್ಲಾದೇಶ ತಂಡದ ಭದ್ರತೆಗೂ ಹೈಬ್ರಿಡ್ ಮಾದರಿ ಸೂಕ್ತ’ ಎಂದು ಅಮಿನುಲ್ ಹೇಳಿದರು.
ಟಿ20 ವಿಶ್ವಕಪ್ ಫೆಬ್ರವರಿ 7ರಂದು ಮಾರ್ಚ್ 8ರವರೆಗೆ ನಡೆಯಲಿದೆ. ಬಾಂಗ್ಲಾದೇಶ ತನ್ನ ನಾಲ್ಕು ಪಂದ್ಯಗಳನ್ನು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ಆಡಲಿದೆ.
‘ಸಾಕಷ್ಟು ಬಲವಾದ ವಾದಗಳೊಂದಿಗೆ, ಬಾಂಗ್ಲಾದೇಶ ತಂಡದ ಭದ್ರತೆ ಹಾಗೂ ಘನತೆಯ ವಿಷಯಗಳಲ್ಲಿ ನಾವು ಯಾವತ್ತೂ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತದಲ್ಲಿ ಪಂದ್ಯಗಳನ್ನು ಆಡುವಾಗ ಬಾಂಗ್ಲಾ ಎದುರಿಸಬಹುದಾದ ಆತಂಕಗಳ ಕುರಿತು ಐಸಿಸಿಗೆ ಮನವರಿಕೆ ಮಾಡುತ್ತೇವೆ. ನಮ್ಮ ಮನವಿಗೆ ಸಕಾರಾತ್ಮಕ ಸ್ಪಂದನೆ ಸಿಗುವ ವಿಶ್ವಾಸಿವೆ ನಾವು ವಿಶ್ವಕಪ್ ಟೂರ್ನಿಯಲ್ಲಿ ಆಡಲು ಬದ್ಧರಾಗಿದ್ದೇವೆ’ ಎಂದು ನಜ್ರುಲ್ ಸ್ಪಷ್ಟಪಡಿಸಿದರು.
ಪಿಎಸ್‌ಎಲ್‌ಗೆ ಮುಸ್ತಫಿಝುರ್: ಬಾಂಗ್ಲಾದ ವೇಗಿ ಮುಸ್ತಫಿಝುರ್ ರೆಹಮಾನ್ ಅವರು ಪಾಕಿಸ್ತಾನ ಪ್ರೀಮಿಯರ್ ಲೀಗ್ (ಪಿಎಸ್‌ಎಲ್) ಟೂರ್ನಿಯಲ್ಲಿ ಆಡಲು ಸಿದ್ಧರಾಗಿದ್ದಾರೆ. ಅವರು ಪಿಎಸ್‌ಎಲ್ ಡ್ರಾಫ್ಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪಿಎಸ್‌ಎಲ್ ಆಟಗಾರರ ಹರಾಜು ಪ್ರಕ್ರಿಯೆ ಶೀಘ್ರದಲ್ಲಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.