ADVERTISEMENT

ಮಹಿಳಾ ಟಿ20 ವಿಶ್ವಕಪ್: ಮೊದಲ ಬಾರಿ ಫೈನಲ್‌ಗೇರಿದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮಾರ್ಚ್ 2020, 6:21 IST
Last Updated 5 ಮಾರ್ಚ್ 2020, 6:21 IST
ಶಫಾಲಿ ವರ್ಮಾ ಮತ್ತು ಹರ್ಮನ್‌ಪ್ರೀತ್ ಕೌರ್ (ಫೈಲ್ ಚಿತ್ರ)
ಶಫಾಲಿ ವರ್ಮಾ ಮತ್ತು ಹರ್ಮನ್‌ಪ್ರೀತ್ ಕೌರ್ (ಫೈಲ್ ಚಿತ್ರ)   

ಹೊಸದಿಲ್ಲಿ: ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಚೊಚ್ಚಲ ಬಾರಿಗೆ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಫೈನಲ್‌ಗೇರಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಗುರುವಾರ ನಡೆದ ಸೆಮಿಫೈನಲ್ ಪಂದ್ಯವು ಮಳೆಯ ಕಾರಣದಿಂದ ರದ್ದಾದ ಬಳಿಕ, ಅಂಕಗಳ ಆಧಾರದಲ್ಲಿ ಭಾರತವು ಫೈನಲ್‌ಗೇರಿದೆ.

ಸೆಮಿಫೈನಲ್‌ಗಳಿಗೆ ಮೀಸಲು ದಿನ ಇರಲಿಲ್ಲ. ಎ ಗ್ರೂಪ್‌ನಲ್ಲಿ ಭಾರತವು ಅಗ್ರಸ್ಥಾನಿಯಾಗಿದ್ದ ಕಾರಣದಿಂದಾಗಿ, ಟೂರ್ನಿಯ ಫೈನಲ್‌ಗೆ ಭಾರತವು ಸುಲಭವಾಗಿ ಪ್ರವೇಶಿಸಿದೆ.

ADVERTISEMENT

ಎರಡನೇ ಸೆಮಿಫೈನಲ್ ಪಂದ್ಯವು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯಲಿದೆ. ಅದಕ್ಕೂ ಮಳೆಯ ಕಾಟವಿದ್ದರೆ, ಬಿ ಗ್ರೂಪ್‌ನಲ್ಲಿ ಅಗ್ರಸ್ಥಾನಿಯಾಗಿರುವ ದಕ್ಷಿಣ ಆಫ್ರಿಕಾ ಮಹಿಳೆಯರು ಫೈನಲ್ ಪ್ರವೇಶಿಸಲಿದ್ದಾರೆ.

ಐಸಿಸಿ ನಿಯಮಾವಳಿಯ ಪ್ರಕಾರ, ಎರಡೂ ಇನ್ನಿಂಗ್ಸ್‌ಗಳಲ್ಲಿ ಕನಿಷ್ಠ ಐದು ಓವರುಗಳ ಆಟ ನಡೆದರೆ ಅದನ್ನು ಪಂದ್ಯ ಎಂದು ಪರಿಗಣಿಸಲಾಗುತ್ತದೆ ಮತ್ತು ಸಾಧ್ಯವಾಗದಿದ್ದರೆ ಪಂದ್ಯ ರದ್ದು ಎಂದು ಘೋಷಿಸಲಾಗುತ್ತದೆ.

ಆದರೆ, ಐಸಿಸಿ ಟೂರ್ನಿಗಳಲ್ಲಾದರೆ ಕನಿಷ್ಠ ಓವರುಗಳ ಸಂಖ್ಯೆಯು ತಲಾ 10.

2018ರ ಮಹಿಳಾ ಟಿ-20 ಕ್ರಿಕೆಟ್ ಆವೃತ್ತಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳೇ ಸೆಮಿಫೈನಲ್‌ನಲ್ಲಿ ಸ್ಫರ್ಧಿಸಿದ್ದವು. ಇದರಲ್ಲಿ ಭಾರತ ಸೋತು ಟೂರ್ನಿಯಿಂದ ಹೊರಬಿದ್ದಿತ್ತು.

ಭಾರತವು ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿದ್ದು, ಆತಿಥೇಯ ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ತಂಡಗಳನ್ನು ಸೋಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.